ಬದ್ಧತೆ ಇದ್ದಾಗ ಸುಸಜ್ಜಿತ ಸಮಾಜ ನಿರ್ಮಾಣ ಸಾಧ್ಯ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

Hasiru Kranti
ಬದ್ಧತೆ ಇದ್ದಾಗ ಸುಸಜ್ಜಿತ ಸಮಾಜ ನಿರ್ಮಾಣ ಸಾಧ್ಯ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
WhatsApp Group Join Now
Telegram Group Join Now
ವಿಜಯಪುರ: ಸಾರ್ವಜನಿಕ ಕ್ಷೇತ್ರದಲ್ಲಿ ಬದ್ಧತೆ, ಕಾಳಜಿಯಿಂದ ಕೆಲಸ ಮಾಡಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ವಿಜಯಪುರದ ಲೋಣಿಯಲ್ಲಿ ಶ್ರೀ ಸಿದ್ದೇಶ್ವರ ಶಿಕ್ಷಣ ಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ, ವಿಜ್ಞಾನ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಶಿಕ್ಷಣ, ಕುಡಿಯುವ ನೀರು, ಆಸ್ಪತ್ರೆಯಂತಹ ವಿಷಯದಲ್ಲಿ ರಾಜಕಾರಣ ಮಾಡದಿದ್ದರೆ ಸುಸಜ್ಜಿತ ಸಮಾಜ ಸಾಧ್ಯ. ಹಿಂದಿನವರು ನಿಸ್ವಾರ್ಥ ಮನೋಭಾವದಿಂದ ಸಂಸ್ಥೆಗಳನ್ನು ಕಟ್ಟಿದ್ದಾರೆ ಎಂದು ಸಚಿವರು ಪ್ರಶಂಸಿಸಿದರು.
ಶಿಕ್ಷಣಕ್ಕೆ ನಮ್ಮ ಜೀವನದಲ್ಲಿ ಎಲ್ಲಿಲ್ಲದ ಮಹತ್ವವಿದೆ.
ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕೆನ್ನುವ ಕನಸು ಬಡವ, ಶ್ರೀಮಂತ ಭೇದವಿಲ್ಲದೆ ಎಲ್ಲರಲ್ಲೂ ಇರುತ್ತದೆ. ವಿದ್ಯೆ ಇದ್ದಲ್ಲಿ ಕೀರ್ತಿ ಮತ್ತು ಸಂಪತ್ತು ಇರುತ್ತದೆ. ರಾಜ್ಯದ ಭವಿಷ್ಯ, ಮಕ್ಕಳ ಭವಿಷ್ಯ, ದೇಶದ ಭವಿಷ್ಯಕ್ಕಾಗಿ ಶಿಕ್ಷಣ ಕಟ್ಟಿದ ಮಹನೀಯರ ಕಾರ್ಯ ಶ್ಲಾಘನೀಯ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
 ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು ಎನ್ನುವಂತೆ ಬದ್ಧತೆ, ಸಾಮಾಜಿಕ ಕಾಳಜಿಯಿಂದ
27ನೇ ವಯಸ್ಸಿಗೆ ಶಿಕ್ಷಣ ಸಂಸ್ಥೆ ಕಟ್ಟಿದ ಬಿ.ಎಂ.ಕೋರೆ ಅವರು ಸಮಾಜಕ್ಕೆ ಆದರ್ಶ ಎಂದರು.
ಮಹಿಳೆಯರ ಸ್ವಾವಲಂಬನೆಗಾಗಿ ನಮ್ಮ ಸರಕಾರ  ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಸಾಕಷ್ಟು ವಿರೋಧಗಳ ಮಧ್ಯೆಯೂ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಮಹಿಳೆಯರಿಗೆ ಏನಾದರೂ ಸಹಾಯ ಮಾಡಬೇಕೆಂದು ಗೃಹಲಕ್ಷ್ಮಿ ಯೋಜನೆ ಜೊತೆಗೆ ಗೃಹಲಕ್ಷ್ಮಿ ಬ್ಯಾಂಕ್ ಸ್ಥಾಪನೆ ಮಾಡಿದ್ದೇವೆ. ಬ್ಯಾಂಕಿನ ಸದಸ್ಯರಾಗಿ ಪ್ರಯೋಜನ ಪಡೆದುಕೊಳ್ಳಿ ಎಂದು ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.
ಪಾಲಕರ ಕನಸು ನನಸು ಮಾಡುವ ಜವಾಬ್ದಾರಿ ಮಕ್ಕಳದ್ದು ಎಂದ ಸಚಿವರು, ಮಕ್ಕಳ ಭವಿಷ್ಯಕ್ಕಾಗಿ ನಮ್ಮ ಕ್ಷೇತ್ರದಲ್ಲಿ ದೊಡ್ಡ ಹೆಜ್ಜೆ ಇಡಲಾಗುತ್ತಿದೆ. ಡಿಜಿಟಲ್ ಡೆಟಾಕ್ಸ್ ಯೋಜನೆಯಡಿ ಕ್ಷೇತ್ರದಲ್ಲಿ ರಾತ್ರಿ 7 ರಿಂದ 9 ಗಂಟೆಯವರೆಗೆ ಎಲ್ಲರೂ ಮೊಬೈಲ್, ಟಿವಿ ಬಂದ್ ಮಾಡಿ ಮಕ್ಕಳ ಓದಿನೆಡೆಗೆ ಗಮನ ನೀಡುವಂತೆ ಮಾಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಬೀದರ್ ನ ಸಿದ್ದಾರೂಢ ಆಶ್ರಮದ ಶ್ರೀ ಶಿವಕುಮಾರ ಸ್ವಾಮಿಗಳು, ಆಳೂರು ಸಿದ್ಧಾರೂಢ ಆಶ್ರಮದ ಶ್ರೀ ಶಂಕರಾನಂದ ಮಹಾಸ್ವಾಮಿಗಳು, ಸಚಿವರಾದ ಶಿವಾನಂದ ಪಾಟೀಲ, ಶಾಸಕರಾದ ವಿಠ್ಠಲ ಕಟಕದೊಂಡ, ಇಂಡಿ ಶಾಸಕರಾದ ಯಶವಂತಗೌಡ ಪಾಟೀಲ, ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಅರುಣ ಶಹಾಪುರ, ಡಾ. ವಿಜಯಾ ಕೋರಿಶೆಟ್ಟಿ, ಕುಲಪತಿಗಳು ಅಕ್ಕಮಹಾದೇವಿ ವಿಶ್ವವಿದ್ಯಾಲಯ, ವಿಜಯಪುರ,  ವಿ.ಸಿ.ನಾಗಠಾಣ, ಜಿಲ್ಲಾಧ್ಯಕ್ಷರು ವೀರಶೈವ ಮಹಾಸಭಾ ವಿಜಯಪುರ, ಬಿ.ಎಂ.ಕೋರೆ, ಸಿದ್ಧೇಶ್ವರ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು, ಡಾ.ಎಂ.ಎಸ್.ಮದಬಾವಿ, ಡಾ.ವಿ.ಡಿ.ಐಹೊಳ್ಳಿ, ಡಾ.ಎಸ್.ಕೆ.ಕೊಪ್ಪ, ಡಾ.ಸಂಗಮೇಶ ಮೇತ್ರಿ,  ಹಾಸಂಪೀರ ವಾಲೀಕಾರ,  ಜಂಬೂನಾಥ ಕಂಚ್ಯಾಣಿ, ಡಾ.ಮಲ್ಲಿಕಾರ್ಜುನ ಉಟಗಿ, ಪಂಚಪ್ಪ ಕಲಬುರ್ಗಿ,  ವಿ.ಡಿ.ಕಲ್ಯಾಣಶೆಟ್ಟಿ  ಮೊದಲಾದವರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article