ಮೈಸೂರು (ಜೂ.23): ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲೇ ಅಸ್ಪೃಶ್ಯತೆ ಆಚರಣೆ ಇನ್ನೂ ಜೀವಂತವಿದೆ ಎಂಬುದಕ್ಕೆ ಮತ್ತೊಂದು ಘಟನೆ ಸಾಕ್ಷಿಯಾಗಿದೆ.
ದಲಿತ ಯುವಕನಿಗೆ ದೇವಸ್ಥಾನ ಪ್ರವೇಶಿಸಲು ಅರ್ಚಕರು, ಗ್ರಾಮಸ್ಥರು ಅಡ್ಡಿಪಡಿಸಿದ ಘಟನೆ ಮೈಸೂರು ಜಿಲ್ಲೆಯ ಕಿರಾಳು ಗ್ರಾಮದಲ್ಲಿ ನಡೆದಿದ್ದು, ಈ ಸಂಬಂಧ ಯುವಕ ದೂರು ನೀಡಿದ ಹಿನ್ನೆಲೆ ಅನಿಷ್ಟ ಪದ್ಧತಿಗೆ ಜಿಲ್ಲಾಡಳಿತ ಬಿಸಿ ಮುಟ್ಟಿಸಿದೆ, ಅಲ್ಲದೇ ಇಂತಹ ಅಸ್ಪೃಶ್ಯತೆ ಆಚರಣೆಗಳನ್ನ ಸಹಿಸುವುದಿಲ್ಲ ಎಂದು ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದ್ದಾರೆ.
ಹೌದು, ಕಿರಾಳು ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ನವೀನ್ ಎಂಬ ಯುವಕನಿಗೆ ಗ್ರಾಮದ ಶಂಭುಮಹಾಲಿಂಗೇಶ್ವರ ದೇವಸ್ಥಾನಕ್ಕೆ ಪ್ರವೇಶಿಸಲು ಅರ್ಚಕರು, ಗ್ರಾಮಸ್ಥರು ಅಡ್ಡಿಪಡಿಸಿದ್ದಾರೆ. ಗ್ರಾಮದಲ್ಲಿನ ಅಸ್ಪೃಶ್ಯತೆ ಬಗ್ಗೆ ತಹಸೀಲ್ದಾರ್‌ರಿಗೆ ದೂರು ನೀಡಿದ್ದ ಯುವಕ ನವೀನ್. ದೂರು ಬರುತ್ತಿದ್ದಂತೆ ಎಚ್ಚೆತ್ತುಕೊಂಡ ಅಧಿಕಾರಿಗಳು ಜಿಲ್ಲಾಧಿಕಾರಿ ಡಾ ಕೆವಿ ರಾಜೇಂದ್ರ ನಿರ್ದೇಶನದ ಮೇರೆಗೆ ತಹಸೀಲ್ದಾರ್ ಮಹೇಶ್ ಕುಮಾರ ನೇತೃತ್ವದಲ್ಲಿ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದ ಮುಖಂಡರು, ಅರ್ಚಕರೊಂದಿಗೆ ಚರ್ಚಿಸಿದ್ದಾರೆ.
ದೇವಸ್ಥಾನದ ಆವರಣದಲ್ಲಿ ಸಭೆ ಕರೆದು ಅಸ್ಪೃಶ್ಯತೆ ಆಚರಿಸದಂತೆ ಜಾಗೃತಿ ಮೂಡಿಸಿದ್ದಾರೆ. ಒಂದು ಅಸ್ಪೃಶ್ಯತೆ ಆಚರಿಸಿದರೆ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ್ದಾರೆ. ಮೌಢ್ಯಾಚರಣೆ, ಅನಿಷ್ಠ ಪದ್ದತಿಗಳಿಂದ ಕಾನೂನು ಮೀರುವಂತಿಲ್ಲ ಎಂದು ಕಿರಾಳು ಗ್ರಾಮಸ್ಥರಿಗೆ ಕಾನೂನು ಪಾಠ ಮಾಡಿದ್ದಾರೆ. ಅಧಿಕಾರಿಗಳ ಎಚ್ಚರಿಕೆ ಬಳಿಕ ದಲಿತ ಯುವಕ ನವೀನ್‌ಗೆ ದೇವಸ್ಥಾನ ಪ್ರವೇಶಿಸಲು ಅವಕಾಶ ಮಾಡಿಕೊಡಲಾಗಿದೆ.