ಕೋಲ್ಕತಾ : ಅರಣ್ಯ ಇಲಾಖೆಯ ಮಹಿಳಾ ಅಧಿಕಾರಿಯೊಬ್ಬರಿಗೆ ಬೆದರಿಕೆ ಹಾಕಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಪಶ್ಚಿಮ ಬಂಗಾಳದ ಬಂದೀಖಾನೆ ಸಚಿವ ಅಖಿಲ್ ಗಿರಿ ಸೋಮವಾರ ತಮ್ಮ ರಾಜೀನಾಮೆಯನ್ನು ಮುಖ್ಯಮಂತ್ರಿ ಕಚೇರಿಗೆ ಕಳುಹಿಸಿರುವುದಾಗಿ ಹೇಳಿದ್ದಾರೆ. ಸಚಿವ ಸ್ಥಾನದಿಂದ ಕೆಳಗಿಳಿಯುವಂತೆ ಮತ್ತು ಕ್ಷಮೆಯಾಚಿಸುವಂತೆ ತೃಣಮೂಲ ಕಾಂಗ್ರೆಸ್ ನಾಯಕತ್ವವು ನಿನ್ನೆ ಅವರಿಗೆ ಸೂಚಿಸಿತ್ತು.
ಆದರೆ ಯಾವುದೇ ಅಧಿಕಾರಿಯ ಬಳಿ ತಾನು ಕ್ಷಮೆಯಾಚಿಸುವುದಿಲ್ಲ, ಬದಲಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಕ್ಷಮೆಯಾಚಿಸುತ್ತೇನೆ ಎಂದು ರಾಮನಗರದ ಟಿಎಂಸಿ ಶಾಸಕ ಅಖಿಲ್ ಗಿರಿ ಹೇಳಿದರು.
“ನಾನು ನನ್ನ ರಾಜೀನಾಮೆಯನ್ನು ಮುಖ್ಯ ಕಾರ್ಯದರ್ಶಿಯವರ ಮೂಲಕ ಮುಖ್ಯಮಂತ್ರಿ ಕಚೇರಿಗೆ ಸಲ್ಲಿಸಿದ್ದೇನೆ. ಆದರೆ ನಾನು ಯಾವುದೇ ಅಧಿಕಾರಿಗೆ ಕ್ಷಮೆಯಾಚಿಸುವುದಿಲ್ಲ. ನಾನು ಮುಖ್ಯಮಂತ್ರಿಗೆ ಕ್ಷಮೆಯಾಚಿಸುತ್ತೇನೆ” ಎಂದು ನಗರದ ದಕ್ಷಿಣ ಭಾಗದಲ್ಲಿರುವ ಶಾಸಕರ ಭವನದಿಂದ ಹೊರಡುವಾಗ ಗಿರಿ ಸುದ್ದಿಗಾರರಿಗೆ ತಿಳಿಸಿದರು.
“ಜನರ ಕಷ್ಟಗಳನ್ನು ನೋಡಿದ ನಂತರ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಅವರನ್ನು ಹೇಗೆ ಹಿಂಸಿಸುತ್ತಿದ್ದಾರೆ ಎಂಬುದನ್ನು ನೋಡಿದಾಗ ನಾನು ಆ ದಿನ ತಾಳ್ಮೆ ಕಳೆದುಕೊಂಡಿದ್ದೆ. ಒಂದು ನಿರ್ದಿಷ್ಟ ಪದ ಬಳಸಿದ್ದಕ್ಕಾಗಿ ನಾನು ವಿಷಾದಿಸುತ್ತೇನೆ. ಅದರ ಹೊರತಾಗಿ ನನ್ನ ಬೇರೆ ಯಾವ ಮಾತಿಗೂ ಕ್ಷಮೆ ಯಾಚಿಸುತ್ತಿಲ್ಲ. ನಾನು ಏನೇ ಮಾಡಿದರೂ ಅದು ಜನರ ಒಳ್ಳೆಯದಕ್ಕಾಗಿಯೇ” ಎಂದು ಗಿರಿ ಹೇಳಿದರು.