ಬೆಂಗಳೂರು, ಸೆಪ್ಟೆಂಬರ್ 23: ಬಿಜೆಪಿ ಶಾಸಕ ಮುನಿರತ್ನ ಮೂರು ಪ್ರಕರಣಗಳಲ್ಲಿ ಸಿಲುಕಿಕೊಂಡು ಒದ್ದಾಡುತ್ತಿದ್ದಾರೆ. 2 ಕೇಸ್ಗಳಿಂದ ಆಚೆ ಬಂದು ಮತ್ತೊಂದರಲ್ಲಿ ಜೈಲು ಪಾಲಾಗಿದ್ದಾರೆ. ಈ ಮಧ್ಯೆ ಅತ್ಯಾಚಾರ ಆರೋಪ ಮಾಡಿರುವ ಸಂತ್ರಸ್ತೆ ಪುತ್ರನಿಗೆ ಮುನಿರತ್ನ ಬೆಂಬಲಿಗರು ಬೆದರಿಕೆ ಹಾಕಿದ್ದಾರೆ ಎನ್ನಲಾಗಿತ್ತು. ಮುನಿರತ್ನ ನಾಯ್ಡು ಬೆಂಬಲಿಗರಿಂದ ಜೀವ ಬೆದರಿಕೆ ಹಿನ್ನೆಲೆ ಮಾಜಿ ಕಾರ್ಪೊರೇಟರ್ ವೇಲು ನಾಯಕ್ ಹಾಗೂ ದಲಿತ ಸಂಘಟನೆ ಮುಖಂಡರು ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿದ್ದಾರೆ.
ಸಿಎಂ ಭೇಟಿ ಬಳಿಕ ಮಾತನಾಡಿದ ಮಾಜಿ ಕಾರ್ಪೊರೇಟರ್ ವೇಲು ನಾಯಕ್, ಹೆಬ್ಬಗೋಡಿ ಠಾಣೆ ಪಿಐ ಐಎನ್ ರೆಡ್ಡಿ ಸಾಕ್ಷಿನಾಶಕ್ಕೆ ಮುಂದಾಗುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಮುನಿರತ್ನ ನಾಯ್ಡುಗೆ ಐಎನ್ ರೆಡ್ಡಿಯಿಂದ ವಿರೋಧಿಗಳ ಫೋನ್ ಟ್ಯಾಪ್ನಿಂದ ಹಿಡಿದು ಎಲ್ಲಾ ರೀತಿಯ ಸಹಾಯ ಮಾಡಿದ್ದಾನೆ. ಸಾಕ್ಷಿ ನಾಶಪಡಿಸುವವರಲ್ಲಿ ಇನ್ಸ್ಪೆಕ್ಟರ್ ಐ.ಎನ್.ರೆಡ್ಡಿ ಪ್ರಮುಖರು. ಹೀಗಾಗಿ ಅವರನ್ನು ಅಮಾನತು ಮಾಡಬೇಕು. ಜೊತೆಗೆ ಪ್ರಕರಣದ ತನಿಖೆ ತೀವ್ರಗೊಳಿಸಬೇಕು ಎಂದು ಹೇಳಿದ್ದಾರೆ.