ಮಂಡಿ (ಹಿಮಾಚಲ ಪ್ರದೇಶ): ಹಿಮಾಚಲ ಪ್ರದೇಶದಲ್ಲಿ ಸಂಪೂರ್ಣ “ಮೋದಿ ಅಲೆ” ಇದ್ದು, ಬಿಜೆಪಿ ಎಲ್ಲಾ ನಾಲ್ಕು ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ ಎಂದು ಮಂಡಿಯ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್ ಅವರು ಶನಿವಾರ ಹೇಳಿದರು.
7ನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಲು ಕಂಗನಾ ರಣಾವತ್ ಅವರು ಮಂಡಿಯ ಮತಗಟ್ಟೆಗೆ ಆಗಮಿಸಿದ್ದರು.
ಈ ವೇಳೆ ಮತದಾನ ಮಾಡುವಂತೆ ಮತದಾರರನ್ನು ಒತ್ತಾಯಿಸಿದ ಕಂಗನಾ, ಪ್ರಜಾಪ್ರಭುತ್ವದ ಈ ಹಬ್ಬದಲ್ಲಿ ಪ್ರತಿಯೊಬ್ಬರೂ ತಮ್ಮ ಮತದಾನದ ಹಕ್ಕನ್ನು ಚಲಾಯಿಸುವಂತೆ ನಾನು ಮನವಿ ಮಾಡುತ್ತೇನೆ. ನಾವು ಈ ಹಕ್ಕನ್ನು ಚಲಾಯಿಸಲು ಸಾಕಷ್ಟು ರಕ್ತಪಾತ ನಡೆದಿದೆ. ಇದನ್ನು ಸ್ಮರಿಸಬೇಕು. ಹಿಮಾಚಲ ಪ್ರದೇಶದಲ್ಲಿ ಸಂಪೂರ್ಣ ಮೋದಿ ಅಲೆ ಇದೆ. ನಮ್ಮ ಪ್ರಧಾನಿ ಸುಮಾರು 200 ರ್ಯಾಲಿಗಳನ್ನು ನಡೆಸಿದ್ದಾರೆ, ಕೇವಲ ಎರಡು ತಿಂಗಳಲ್ಲಿ ಕನಿಷ್ಠ 80-90 ಸಂದರ್ಶನಗಳನ್ನು ನೀಡಿದ್ದಾರೆ. ನಾವೆಲ್ಲರೂ ಮೋದಿಯವರ ಸೈನಿಕರಾಗಿದ್ದು, ಹಿಮಾಚಲ ಪ್ರದೇಶದ ಎಲ್ಲಾ ನಾಲ್ಕು ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು.
ಬಳಿಕ ಪ್ರಧಾನಿ ಮೋದಿಯವರು ಕನ್ಯಾಕುಮಾರಿಯಲ್ಲಿ ಧ್ಯಾನ ಮಾಡುತ್ತಿರುವುದಕ್ಕೆ ಟೀಕೆ ಮಾಡಿದ್ದ ಪ್ರತಿಪಕ್ಷಗಳ ವಿರುದ್ಧ ಕಿಡಿಕಾರಿದ ಕಂಗನಾ, ಪ್ರಧಾನಿ ಅವರಿಗೆ ಧ್ಯಾನ ಹೊಸದಲ್ಲ. ಅವರು ರಾಜಕಾರಣಿಯಾಗುವುದಕ್ಕಿಂತ ಮೊದಲಿನಿಂದಲೂ ಧ್ಯಾನ ಮಾಡುತ್ತಿದ್ದರು. ಈಗ ಈ ಜನರಿಗೆ ಅದರಿಂದ ಸಮಸ್ಯೆಯಾಗುತ್ತಿದೆ ಎಂದು ಹೇಳಿದರು.