ಹಸಿರು ಕ್ರಾಂತಿ ವರದಿ,ಜಮಖಂಡಿ : ನಗರದ ಸಮೀಪವಿರುವ ಕಡಕೊಳ ಪುನರ್ವಸತಿ ಕೇಂದ್ರದಲ್ಲಿ ನೀರಿನ ಸಮಸ್ಯೆ ಉಂಟಾಗಿದೆ. ನೀರಿನ ಸಮಸ್ಯೆಯ ಪರಿಹಾರಕ್ಕೆ ಅನೇಕಬಾರಿಗೆ ಸಲ್ಲಿಸಿದ ಮನವಿಗಳು ಪ್ರಕಟಿಸಿದ ಸುದ್ದಿಗಳು ಪ್ರಯೋಜನವಾಗಿಲ್ಲ. ಪತ್ರಕೆಯಲ್ಲಿ ಸುದ್ದಿ ಪ್ರಕಟವಾದಾಗ ನೀರಿನ ಸಮಸ್ಯೆ ಬಗೆಹರಿಸುತ್ತೇವೆ ಎಂದು ಸಬೂಬು ಹೇಳಿರುವ ಅಧಿಕಾರಿಗಳು ಈ ವರೆಗೂ ಕ್ರಮ ಜರುಗಿಸಿಲ್ಲ. ನಗರಸಭೆಯವರಿಗೆ ಹೇಳಿ
ಪ್ಲಾಟ್ನಲ್ಲಿರುವ ತೆರೆದ ಬಾವಿಯೊಂದನ್ನು ಸ್ವಚ್ಛಗೊಳಿಸಿ ಅದರಲ್ಲಿಯ ನೀರನ್ನು ಬಳಕೆಗೆ ಅನುಕೂಲ ಮಾಡಿಸಿಕೊಡಲಾಗುವದೆಂದು ಅಧಿಕಾರಿಗಳು ಹೇಳಿಕೆ ನೀಡಿದ್ದರು ಆದರೆ ಈ ವರೆಗೂ ಬಾವಿಯ ಸ್ವಚ್ಛತೆಯಾಗಿಲ್ಲ. ಬಾವಿಯಲ್ಲಿನತ್ಯಾಜ್ಯವನ್ನು ತೆಗೆಯಲಾಗಿದೆ, ಹಳೆಯ ಕೊಳೆತ ನೀರನ್ನು ಎತ್ತಿ ಸ್ವಚ್ಛಗೊಳಿಸುವ ಕೆಲಸವಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ನಿವಾಸಿಗಳಿಗೆ ನೀರಿನ ತೊಂದರೆ ತಪ್ಪಿಲ್ಲ. ಪ್ರತಿನಿತ್ಯ ನೀರಿಗಾಗಿ 3 ಕಿ.ಮಿ ದೂರ ಸಂಚರಿಸಿ ನೀರು ತಂದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಪುನರ್ವಸತಿ ಕೇಂದ್ರದ ನಿವಾಸಿಗಳು ಮಾಹಿತಿ ನೀಡಿದ್ದಾರೆ.

ಕಡು ಬೇಸಿಗೆ ಇರುವದರಿಂದ ಅಂತರಜಲಮಟ್ಟ ಕುಸಿದು ಹೋಗಿದ್ದು ಕೊಳವೆಬಾವಿಗಳು ಬತ್ತಿಹೋಗಿವೆ. ಶುದ್ಧ ನೀರಿನ ಘಟಕಗಳು ಬಂದ್ ಆಗಿವೆ. ಜನರಿಗೆ ದೂರದಿಂದಲಾದರೂ ಕುಡಿಯುವ ನೀರು ತಂದು ಕೊಳ್ಳಬಹುದು ಆದರೆ ಜಾನುವಾರುಗಳು ಹಾಗೂ ನಿತ್ಯದ ಬಳಕೆಗೆ ನೀರಿಲ್ಲದಂತಾಗಿರುವದು ಬಹಳಷ್ಟು ಸಮಸ್ಯೆಯಾಗಿದೆ ಎಂದು ಕಡಕೊಳ ಪುಕೆ ನಿವಾಸಿ ಶ್ರೀಪಾದ ತಳಗಡೆ ತಿಳಿಸಿದ್ದಾರೆ. ಸಂಬಂದ ಪಟ್ಟ ಅಧಿಕಾರಿಗಳು ಕ್ರಮ ಜರುಗಿಸಬೇಕು ಇಲ್ಲಿಯ ಜನರ ನೀರಿನ ಸಮಸ್ಯೆ ಬಗೆ ಹರಿಸುವಂತೆ ಮನವಿ ಮಾಡಿದ್ದಾರೆ.