ಶಿವಮೊಗ್ಗ: ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿಯೂ ಈ ಭಾರಿ ತಾಪಮಾನ 40 ಡಿಗ್ರಿ ತಲುಪಿದೆ. ಜನರಷ್ಟೆ ಅಲ್ಲದೆ, ಪಕ್ಷಿಗಳೂ ಸಹ ಬಿಸಿಲಿನ ಧಗೆ ತಾಳಲಾಗದೆ ಪರದಾಡುತ್ತಿವೆ. ಇದನ್ನು ಮನಗಂಡ ಶಿವಮೊಗ್ಗದ ಪಕ್ಷಿ ಪ್ರೇಮಿಗಳು ಪಕ್ಷಿಗಳಿಗೆ ನೀರು ಹಾಗೂ ಆಹಾರ (ಕಾಳು) ಇಡುವ ಮೂಲಕ ತಮ್ಮ ಪರಿಸರಪ್ರೇಮ ಮೆರೆದಿದ್ದಾರೆ.
ಶಿವಮೊಗ್ಗದ ಡಿ.ಕೆ. ಶಿವಕುಮಾರ್ ಬ್ರಿಗೇಡ್ ವಿವಿಧ ಸಂಘಟನೆಗಳ ಜೊತೆ ಸೇರಿ ಪಕ್ಷಿಗಳಿಗೆ ನೀರು ಆಹಾರ ಇಡುವ ಕಾರ್ಯವನ್ನು ಮಾಡುತ್ತಿದ್ದಾರೆ. ಬೇಸಿಗೆಯಲ್ಲಿ ನೀರಿನ ಮೂಲಗಳು ಬತ್ತುತ್ತವೆ. ಮನುಷ್ಯರಾದರೆ ಕುಡಿಯಲು ನೀರು ಕೇಳಿ ಪಡೆಯುತ್ತಾರೆ. ಆದರೆ, ಪಕ್ಷಿಗಳು ಹಾಗೆ ಮಾಡಲು ಸಾಧ್ಯವಿಲ್ಲ. ಇದರಿಂದ ಪಕ್ಷಿಗಳಿಗೆ ಕುಡಿಯಲು ನೀರು ಹಾಗೂ ಆಹಾರವನ್ನು ಇಡಲಾಗುತ್ತಿದೆ. ಬ್ರಿಗೇಡ್ನ ಸದಸ್ಯರು ನಗರದ ಪ್ರವಾಸಿ ಮಂದಿರದ ಆವರಣದಲ್ಲಿನ ಮರಗಳಿಗೆ ನೀರು ಹಾಗೂ ಆಹಾರವನ್ನು ನೇತು ಹಾಕಿದರು. ಇದನ್ನು ಎರಡು ದಿನಕ್ಕೊಮ್ಮೆ ನೋಡಿಕೊಂಡು ಅದರಲ್ಲಿ ನೀರು ಕಡಿಮೆಯಾದರೆ, ಕಾಳು ಖಾಲಿಯಾದರೆ ಹಾಕುವ ಕೆಲಸ ಮಾಡುತ್ತಿದ್ದಾರೆ.
ಬಿಸಾಡುವ ಬಾಟಲಿ, ತಟ್ಟೆ ಬಳಕೆ: ಪಕ್ಷಿಗಳಿಗೆ ನೀರು ಹಾಗೂ ಆಹಾರ ನೀಡಲು ಎರಡು ಲೀಟರ್ ಜ್ಯೂಸ್ನ ಖಾಲಿ ಬಾಟಲಿ ತೆಗೆದುಕೊಂಡು, ಅದರಲ್ಲಿ ಅರ್ಧದಷ್ಟು ಕಾಳನ್ನು ಹಾಕಿ, ಬಾಟಲಿಗೆ ಮೂಕ್ಕಾಲು ಭಾಗದಷ್ಟು ನೀರನ್ನು ಹಾಕಿಡಲಾಗುತ್ತಿದೆ. ಬಾಟಲಿ ಕೆಳಗೆ ಪ್ಲಾಸ್ಟಿಕ್ ತಟ್ಟೆ ಹಾಕಿ ಬಾಟಲಿಗೆ ತಂತಿಯಿಂದ ಮೇಲಕ್ಕೆ ಕಟ್ಟಿ, ಅದಕ್ಕೆ ಉದ್ದದಾದ ದಾರದಿಂದ ಮರಕ್ಕೆ ಕಟ್ಟಲಾಗುತ್ತಿದೆ. ಪಕ್ಷಿಗಳು ಬೆಳಗ್ಗೆ ಸಂಜೆ ಈ ಭಾಗದಲ್ಲಿ ಹೆಚ್ಚು ಹಾರಾಟ ನಡೆಸುವುದರಿಂದ ಅವುಗಳಿಗೆ ಅನುಕೂಲವಾಗಲಿದೆ. ಮರದಲ್ಲಿಯೇ ಅದನ್ನು ಕಟ್ಟುತ್ತಿರುವುದರಿಂದ ಪಕ್ಷಿಗಳಿಗೆ ನೈಸರ್ಗಿಕವಾಗಿ ಆಹಾರ ದೂರೆದಂತಾತ್ತದೆ.