ನವದೆಹಲಿ, ಏಪ್ರಿಲ್ 28: ಜಮ್ಮು ಮತ್ತು ಕಾಶ್ಮೀರದ ಅನಂತ್ನಾಗ್ನಲ್ಲಿರುವ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿ ಬಗ್ಗೆ ಸುಳ್ಳು ಸುದ್ದಿ, ತಪ್ಪು ಮಾಹಿತಿ ನೀಡಿ ಜನರ ಹಾದಿ ತಪ್ಪಿಸುತ್ತಿದ್ದ ನೂರಾರು ಪಾಕಿಸ್ತಾನಿ ಯೂಟ್ಯೂಬ್ ಚಾನೆಲ್ಗಳನ್ನು ಭಾರತ ನಿಷೇಧಿಸಿದೆ. ಈ ಮಾಹಿತಿಯನ್ನು ಸರ್ಕಾರದ ಉನ್ನತ ಮೂಲಗಳು ಸ್ಪಷ್ಟಪಡಿಸಿವೆ. ಪಾಕಿಸ್ತಾನದ ರಾಜಕೀಯ ವಿಶ್ಲೇಷಕಿ ಹಾಗೂ ಪತ್ರಕರ್ತೆಯಾದ ಆರ್ಜೂ ಕಾಜ್ಮೀ ಖಾತೆಯನ್ನು ಕೂಡ ಸ್ಥಗಿತಗೊಳಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಅನಂತ್ನಾಗ್ನಲ್ಲಿರುವ ಪಹಲ್ಗಾಮ್ನಲ್ಲಿ ಉಗ್ರರು ದಾಳಿ ನಡೆಸಿ 26 ಮಂದಿ ಪ್ರವಾಸಿಗರನ್ನು ಹತ್ಯೆ ಮಾಡಿದ್ದರು.
ಲಷ್ಕರ್-ಎ-ತೊಯ್ಬಾ ಇದರ ಹೊಣೆ ಹೊತ್ತುಕೊಂಡಿತ್ತು. ನಂತರದ ಬೆಳವಣಿಗೆಯಲ್ಲಿ ಪಾಕಿಸ್ತಾನದ ಯೂಟ್ಯೂಬ್ ಚಾನೆಲ್ಗಳಲ್ಲಿ ಭಾರತದ ಬಗ್ಗೆ ಹಾಗೂ ನಡೆದಿರುವ ಘಟನೆಯನ್ನು ತಿರುಚುವಂತಹ ವರದಿಗಳು ಪ್ರಸಾರವಾಗುತ್ತಿದ್ದವು. ಈ ಹಿನ್ನೆಲೆಯಲ್ಲಿ ಸರ್ಕಾರವು ಸೂಕ್ತ ಕ್ರಮ ಕೈಗೊಂಡಿದ್ದು, ನೂರಕ್ಕೂ ಅಧಿಕ ಪಾಕಿಸ್ತಾನಿ ಯೂಟ್ಯೂಬ್ ಚಾನೆಲ್ಗಳನ್ನು ನಿಷೇಧಿಸಲಾಗಿದೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕ ದಾಳಿಯ ಒಂದು ದಿನದ ನಂತರ, ಪಾಕಿಸ್ತಾನದ ಸಾಮಾಜಿಕ ಮಾಧ್ಯಮಗಳು ತಪ್ಪು ಮಾಹಿತಿ, ಗೊಂದಲದ ಅಪಹಾಸ್ಯದ ತಾಣವಾಗಿ ಮಾರ್ಪಟ್ಟಿದೆ. ಮೃತರು ಹಾಗೂ ಭಾರತೀಯ ಸೈನಿಕರನ್ನು ಅಪಹಾಸ್ಯ ಮಾಡುವುದರಿಂದ ಹಿಡಿದು ದಾಳಿಗೆ ಪ್ರಧಾನಿ ಮೋದಿಯವರನ್ನು ದೂಷಿಸುವವರೆಗೆ ಸುಳ್ಳು ಸುದ್ದಿ ಪ್ರಸಾರ ಮಾಡುತ್ತಿದ್ದರು.
ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಭಾರತೀಯ ಸೇನಾ ಸಿಬ್ಬಂದಿಯನ್ನೂ ಗುರಿಯಾಗಿಸಲಾಗಿತ್ತು, ಕೆಲವು ಪೋಸ್ಟ್ಗಳು ಜೀವ ಉಳಿಸುವುದಕ್ಕಿಂತ ರೀಲ್ಗಳನ್ನು ಚಿತ್ರೀಕರಿಸುವುದರ ಮೇಲೆ ಹೆಚ್ಚು ಗಮನಹರಿಸಿವೆ ಎಂದು ಸುಳ್ಳು ಆರೋಪಿಸಿದ್ದವು.