ರನ್ನ ಬೆಳಗಲಿ: ಏ.25: ಪಟ್ಟಣದ ಸಮೀಪದ ಗ್ರಾಮವಾದ ಮುಗಳಖೋಡ ಗ್ರಾಮದ ಗ್ರಾಮ ಪಂಚಾಯತ ಆಶ್ರಯದಲ್ಲಿ ೨೦೨೪ರ ಸಾರ್ವತ್ರಿಕ ಲೋಕಸಭಾ ಚುನಾವಣೆ ಪ್ರಯುಕ್ತ ರಂಗೋಲಿ ಸ್ಪರ್ಧೆ ಮತ್ತು ಮತದಾನ ಜಾಗೃತಿಯ ದೀಪೋತ್ಸವ ಕಾರ್ಯಕ್ರಮ ಜರಗಿತು.
ಮತದಾನದ ಪ್ರತಿಜ್ಞಾವಿಧಿ ಬೋಧಿಸುವುದರೊಂದಿಗೆ ರಂಗೋಲಿ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿದ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ರೋಹಿತ ಇಟಕನ್ನವರ ಮತದಾನ ಪ್ರಜಾಪ್ರಭುತ್ವದ ಶಕ್ತಿಯಾಗಿದೆ, ಆದ್ದರಿಂದ ಸರ್ಕಾರ ನೀಡಿದ ಸುತ್ತೋಲೆ ಪ್ರಕಾರ ಪ್ರತಿದಿನವೂ ಮತದಾನ ಜಾಗೃತಿಯ ವಿವಿಧ ಕಾರ್ಯ ಕ್ರಮಗಳನ್ನು ನಮ್ಮ ಗ್ರಾಮದ ವಿವಿಧ ಇಲಾಖೆ ಅಧಿಕಾರಿ ವೃಂದದ ಸಹಾಯ ಸಹಕಾರ ಜೊತೆಗೆ ಸಾರ್ವಜನಿಕರ ಪಾಲ್ಗೊಳ್ಳುವಿಕೆಯೊಂದಿಗೆ ಕಾರ್ಯಕ್ರಮವನ್ನು ವಿಶೇಷವಾಗಿ ಆಯೋಜನೆ ಮಾಡುತ್ತಾ ಬಂದಿದ್ದೇವೆ ಎಂದು ಹೇಳಿದರು.
ಹಾಗೆಯೇ ಸಾರ್ವಜನಿಕರೆಲ್ಲರೂ ಕಡ್ಡಾಯವಾಗಿ ಮತದಾನ ಮಾಡುವಂತೆ ಅವರನ್ನು ಜಾಗೃತಿಗೊಳಿಸೋಣ. ಗ್ರಾಮದಲ್ಲಿ ನೂರಕ್ಕೆ ನೂರಷ್ಟು ಮತದಾನ ಆಗುವಂತೆ ಮನ ವಲಿಸೋಣ, ಈ ಒಂದು ಪ್ರಜಾಪ್ರಭುತ್ವದ ಚುನಾವಣೆ ಎಂಬ ಹಬ್ಬದಲ್ಲಿ ನಾವೆಲ್ಲರೂ ಒಟ್ಟಾಗಿ ಸೇರಿ ಮತದಾನದ ಜಾಗೃತಿಯ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸೋಣ ಎಂದು ಹೇಳಿದರು.
ರಂಗೋಲಿ ಸ್ಪರ್ಧೆ ನಿರ್ಣಾಯಕರಾಗಿ ಆಗಮಿಸಿದ ಸ್ಥಳೀಯ ಮಾದರಿ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯರಾದ ನಾಗರಾಜ ಬಟಾಟೆಪ್ಪಗೋಳ, ಮೆಟಗುಡ್ಡ ಗ್ರಾಮದ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯರಾದ ಸುರೇಶ ರಾಜಮನೆ, ರನ್ನ ಬೆಳಗಲಿಯ ಯೋಗ ಶಿಕ್ಷಕರಾದ ರಾಘವೇಂದ್ರ ನೀಲನ್ನವರ ಅವರು ಕಾರ್ಯಕ್ರಮದ ಕುರಿತು ಮಾತನಾಡುವುದರೊಂದಿಗೆ ಮತದಾನ ಜಾಗೃತಿಯನ್ನು ಒಳಗೊಂಡ ಅತ್ಯುತ್ತಮ ರಂಗೋಲಿಯನ್ನು ಚಿತ್ರಿಸಿದ ರಂಗೋಲಿಯ ಸ್ಪರ್ಧಾಳುಗಳ ರಂಗೋಲಿಗೆ ಅಂಕ ನೀಡುವುದರ ಮೂಲಕ ಅತಿ ಹೆಚ್ಚು ಅಂಕಗಳಿಸಿ ಪ್ರಥಮ ಸ್ಥಾನಕ್ಕೆ ಮೈತ್ರಾ ಜಗದಾಳ, ದ್ವಿತೀಯ ಸ್ಥಾನಕ್ಕೆ ರೇಣುಕಾ ನಡುವಿನಕೇರಿ, ತೃತೀಯ ಸ್ಥಾನಕ್ಕೆ ಕಾವೇರಿ ನಡುವಿನಕೇರಿ ಆಯ್ಕೆ ಆದರು. ಈ ವಿಜೇತ ಸ್ಪರ್ದಾಳುಗಳಿಗೆ ಗ್ರಾಮ ಪಂಚಾಯತ್ ಅಧಿಕಾರಿಗಳು ನಗದು ಪುರಸ್ಕಾರ ಮತ್ತು ಗ್ರಂಥ ಬಹುಮಾನವನ್ನು ನೀಡಿ ಗೌರವಿಸಿದರು.
ಈ ಒಂದು ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಸಮಾಧಾನಕರ ಬಹುಮಾನ ನೀಡಲಾಯಿತು. ಪಂಚಾಯತ ಕಾರ್ಯದರ್ಶಿಗಳಾದ ಮಹಾದೇವ ಮೀಶಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಪಂಚಾಯತ್ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು.