ನವದೆಹಲಿ: ಭಾರತ ಮತ್ತು ಯುನೈಟೆಡ್ ಕಿಂಗ್ಡಮ್ ನಡುವಿನ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಮಂಗಳವಾರ ಸಂಪುಟ ಅನುಮೋದನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನಿಂದ ತಮ್ಮ ಎರಡು ದಿನಗಳ ಯುನೈಟೆಡ್ ಕಿಂಗ್‌ಡಮ್ ಭೇಟಿಯನ್ನು ಪ್ರಾರಂಭಿಸಲಿದ್ದಾರೆ.
ಮೂಲಗಳ ಪ್ರಕಾರ, ಜುಲೈ 24 ರಂದು ಲಂಡನ್‌ನಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆಯಿದೆ. ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಪ್ರಧಾನಿಯೊಂದಿಗೆ ತೆರಳಲಿದ್ದಾರೆ. ಪ್ರಧಾನಿಯವರು ಮೊದಲು ಎರಡು ದಿನ ಇಂಗ್ಲೆಂಡ್ ನಲ್ಲಿ ಇರಲಿದ್ದಾರೆ. ಯುಕೆ ಭೇಟಿಯ ಬಳಿಕ ಮಾಲ್ಡೀವ್ಸ್‌ಗೆ ಭೇಟಿ ನೀಡಿ ದ್ವೀಪ ರಾಷ್ಟ್ರದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.
ಯುಕೆ ಪ್ರವಾಸದ ವೇಳೆ, ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರೊಂದಿಗೆ ಪ್ರಧಾನಿ ಮಹತ್ವದ ಮಾತುಕತೆಗಳನ್ನು ನಡೆಸಲಿದ್ದಾರೆ. ಇದೇ ವೇಳೆ, ಮೋದಿ ಅವರು ಕಿಂಗ್ ಚಾರ್ಲ್ಸ್ III ಅವರನ್ನು ಭೇಟಿ ಮಾಡಲಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ತಿಳಿಸಿದ್ದಾರೆ.
ಲಂಡನ್‌ನಿಂದ ವಾಯುವ್ಯಕ್ಕೆ 50 ಕಿಮೀ ದೂರದಲ್ಲಿರುವ ಅಧಿಕೃತ ನಿವಾಸ ಚೆಕರ್ಸ್‌ನಲ್ಲಿ ಬ್ರಿಟಿಷ್ ಪ್ರಧಾನಿ ಸ್ಟಾರ್ಮರ್ ಗುರುವಾರ ಮೋದಿ ಅವರಿಗೆ ಆತಿಥ್ಯ ನೀಡಲಿದ್ದಾರೆ. ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಮತ್ತು ಅವರ ಬ್ರಿಟಿಷ್ ಪ್ರತಿರೂಪ ಜೋನಾಥನ್ ರೆನಾಲ್ಡ್ಸ್ ಅವರು ಇಬ್ಬರು ಪ್ರಧಾನ ಮಂತ್ರಿಗಳ ಸಮ್ಮುಖದಲ್ಲಿ ಮುಕ್ತ ವ್ಯಾಪಾರ ಒಪ್ಪಂದಕ್ಕೆ (FTA) ಸಹಿ ಹಾಕುವ ಸಾಧ್ಯತೆಯಿದೆ ಎಂದು ಪಿಟಿಐ ವರದಿ ಮಾಡಿದೆ.
ಈ ಒಪ್ಪಂದದಿಂದ ಶೇಕಡಾ 99 ರಷ್ಟು ಭಾರತೀಯ ರಫ್ತಿಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ಒಟ್ಟಾರೆ ವ್ಯಾಪಾರ ವಹಿವಾಟು ಹೆಚ್ಚಿಸುವುದರ ಜೊತೆಗೆ ಬ್ರಿಟಿಷ್ ಕಂಪನಿಗಳು ಭಾರತಕ್ಕೆ ವಿಸ್ಕಿ, ಕಾರುಗಳು ಮತ್ತು ಇತರ ಉತ್ಪನ್ನಗಳನ್ನು ಸುಲಭವಾಗಿ ರಫ್ತು ಮಾಡಲು ಅನುವು ಮಾಡಿಕೊಡಲಿದೆ