ಬೆಳಗಾವಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಇಂದು ಬೆಳಗಾವಿಯಲ್ಲಿ ಸಮಸ್ತ ಜೈನ ಅಲ್ಪಸಂಖ್ಯಾತರ ಹೋರಾಟ ಸಮಿತಿ ಏರ್ಪಡಿಸಿದ್ದ ಜೈನ ಸಮಾವೇಶದ ಸ್ಥಳಕ್ಕೆ ಭೇಟಿ ನೀಡಿದರು.
ಜೈನ ಅಭಿವೃದ್ಧಿ ನಿಗಮ ಸ್ಥಾಪಿಸಿ ಪ್ರತಿ ವರ್ಷ 200 ಕೋಟಿ ಅನುದಾನ ಕೊಡಬೇಕು, ಅಲ್ಪಸಂಖ್ಯಾತರ ವಿದ್ಯಾರ್ಥಿನಿಲಯಗಳಲ್ಲಿ ಜೈನರ ಜನಸಂಖ್ಯೆ ಹೆಚ್ಚು ಇರುವ ಜಿಲ್ಲೆಗಳಲ್ಲಿ 2 ವಿದ್ಯಾರ್ಥಿ ನಿಲಯಗಳನ್ನು ಜೈನ ವಿದ್ಯಾರ್ಥಿಗಳಿಗೆ ಮೀಸಲಿಡಬೇಕು- ಇವೇ ಮೊದಲಾದ ಬೇಡಿಕೆಗಳ ಮನವಿಪತ್ರವನ್ನು ಸಮಿತಿಯು ಇದೇವೇಳೆ ವಿಜಯೇಂದ್ರ ಅವರಿಗೆ ಸಲ್ಲಿಸಿತು.
ಜೈನರ ವಿವಿಧ ಬೇಡಿಕೆಗಳ ಕುರಿತು ಸರಕಾರದ ಗಮನ ಸೆಳೆಯುತ್ತೇನೆ. ಅಧಿವೇಶನದಲ್ಲಿ ಈ ವಿಚಾರಗಳನ್ನು ಪ್ರಸ್ತಾಪಿಸಿ ಅವುಗಳ ಅನುಷ್ಠಾನಕ್ಕೆ ಪ್ರಯತ್ನ ಮಾಡುವುದಾಗಿ ವಿಜಯೇಂದ್ರ ಅವರು ತಿಳಿಸಿದರು.
ಸ್ವಾಭಿಮಾನ, ಪ್ರಾಮಾಣಿಕತೆಗೆ ಜೈನ ಸಮಾಜ ಮಾದರಿ ಎಂದು ವಿಜಯೇಂದ್ರ ಅವರು ಮೆಚ್ಚುಗೆ ಸೂಚಿಸಿದರು. ಜೈನಮುನಿಗಳು,ಭಾ.ಜ.ಪಾ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ, ಮಾಜಿ ಶಾಸಕರಾದ ಸಂಜಯ ಪಾಟೀಲ ಹಾಗೂ ಸಮಾಜದ ಪ್ರಮುಖರು ಇದ್ದರು.