ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಸಂಪೂರ್ಣ ಬೆಂಬಲ: ವಿಜಯೇಂದ್ರ

Ravi Talawar
ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ  ಸಂಪೂರ್ಣ ಬೆಂಬಲ: ವಿಜಯೇಂದ್ರ
WhatsApp Group Join Now
Telegram Group Join Now

 

 

ಬಳಗಾವಿ: ಪರಮಪೂಜ್ಯ ಜಯಮೃತ್ಯುಂಜಯ ಸ್ವಾಮೀಜಿ ಅವರನ್ನು ಭೇಟಿ ಮಾಡಿದ್ದೇವೆ. ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಸ್ವಾಮೀಜಿಗಳಿಗೆ ತಿಳಿಸಿದ್ದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ತಿಳಿಸಿದರು.

ಬೆಳಗಾವಿಯಲ್ಲಿ ಇಂದು ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಸ್ವಾಮೀಜಿ ಅವರ ಭೇಟಿ ವೇಳೆ ಪಕ್ಷದ ಹಿರಿಯ ಮುಖಂಡರು ಮತ್ತು ಮಾಜಿ ಸಚಿವ ಸಿ.ಸಿ.ಪಾಟೀಲ್, ಮಾಜಿ ಡಿಸಿಎಂ ಡಾ.ಅಶ್ವತ್ಥನಾರಾಯಣ್, ಶೈಲೇಂದ್ರ ಬೆಲ್ದಾಳೆ, ಶರಣು ಸಲಗರ್, ಭಾ.ಜ.ಪಾ ಜಿಲ್ಲಾ ಅಧ್ಯಕ್ಷರಾದ ಸುಭಾಷ್ ಪಾಟೀಲ ಪಕ್ಷದ ಎಲ್ಲ ಮುಖಂಡರು ಇದ್ದರು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಸ್ವಾಮೀಜಿಗಳಲ್ಲಿ ಮತ್ತೊಂದು ಮನವಿ ಮಾಡಿದ್ದೇನೆ. ಕೆಲವು ವೈಯಕ್ತಿಕ ಕಾರಣಕ್ಕೆ ಪಂಚಮಸಾಲಿ ಹೋರಾಟಕ್ಕೆ ಹಿಂದಿನ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರ ಬೆಂಬಲ ಇಲ್ಲ ಎಂದು ಬಿಂಬಿಸುವ ಪ್ರಯತ್ನ ನಿರಂತರವಾಗಿ ಮಾಡಿಕೊಂಡು ಬಂದಿದ್ದಾರೆ ಎಂದು ವಿವರಿಸಿದರು. ಹಿಂದೆ ಬಿಜೆಪಿ ಸರಕಾರ ಇದ್ದಾಗ ಯಡಿಯೂರಪ್ಪನವರು ಮುಖ್ಯಮಂತ್ರಿಗಳಿದ್ದಾಗ, ಪಂಚಮಸಾಲಿ ಸಮಾಜಕ್ಕೆ 3 ಬಿ ಕೊಡಲಾಗಿತ್ತು. 3 ಬಿ ಕೊಟ್ಟ ಕಾರಣದಿಂದಲೇ ಸಮಾಜಕ್ಕೆ 2 ಎ ಸ್ಥಾನಮಾನ ನೀಡಬೇಕೆಂದು ಹಕ್ಕೊತ್ತಾಯ ಮಂಡಿಸಲು ಸಾಧ್ಯವಾಗಿದೆ ಎಂದು ತಿಳಿಸಿದರು.

ಈ ಹೋರಾಟಕ್ಕೆ ನಮ್ಮ ಬೆಂಬಲ ಇಲ್ಲ; ಯಡಿಯೂರಪ್ಪ ಅವರ ವಿರೋಧ ಇದೆ, ಅನ್ಯಾಯ ಮಾಡಿದರು- ಇವ್ಯಾವುದು ಕೂಡ ಸರಿಯಲ್ಲ; ಸತ್ಯಕ್ಕೆ ದೂರ ಎಂದು ಸ್ಪಷ್ಟಪಡಿಸಿದರು. ಈ ತಪ್ಪು ಅಭಿಪ್ರಾಯಕ್ಕೆ ಅವಕಾಶ ಕೊಡಬಾರದೆನ್ನುವ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.

ಸ್ವಾಮೀಜಿಗಳು ಮನಸ್ಸು ಬಿಚ್ಚಿ ಸಂತೋಷವಾಗಿ ಮಾತನಾಡಿದ್ದಾರೆ. ಸಾಕಷ್ಟು ತಪ್ಪು ಅಭಿಪ್ರಾಯಗಳಿತ್ತು; ಕಾಂಗ್ರೆಸ್ ಸರಕಾರ ಬಂದ ಬಳಿಕ ನಮ್ಮ ಹೋರಾಟವನ್ನು ಹತ್ತಿಕ್ಕುವ ಕೆಲಸವನ್ನು ಮಾಡುತ್ತಿದೆ. ಹಿಂದೆ ಯಾವುದೇ ಸರಕಾರ, ಯಡಿಯೂರಪ್ಪನವರು ಮುಖ್ಯಮಂತ್ರಿಗಳಿದ್ದಾಗ ಸಹ ನಮ್ಮ ಸಮಾಜದ ಮೇಲೆ ಈ ರೀತಿ ದೌರ್ಜನ್ಯಗಳು ಆಗಿಲ್ಲ ಎಂದು ತಿಳಿಸಿದ್ದಾಗಿ ಹೇಳಿದರು.

ಕಾಂಗ್ರೆಸ್ ಸರಕಾರ ಬಂದ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ; ಹೋರಾಟವನ್ನು ಹತ್ತಿಕ್ಕುವ ಕೆಲಸ ಆಗುತ್ತಿದೆ; ಖಂಡಿತ ನೀವೆಲ್ಲರೂ ಸಹಕಾರ ನೀಡಬೇಕೆಂದು ಹೇಳಿದ್ದಾರೆ. ನಾವು ಕೂಡ ಸಂಪೂರ್ಣ ಸಹಕಾರ, ಬೆಂಬಲವನ್ನು ನೀಡುವುದಾಗಿ ತಿಳಿಸಿದ್ದೇನೆ ಎಂದು ತಿಳಿಸಿದರು.

WhatsApp Group Join Now
Telegram Group Join Now
Share This Article