ಬಳ್ಳಾರಿ. ಸೆ. 04: ನವರಾತ್ರಿ ವಿಜಯದಶಮಿ ಪ್ರಯುಕ್ತ ಪಟೇಲ್ ನಗರದ ದುರ್ಗಾ ಕಾಲೋನಿಯ ಸಣ್ಣ ದುರ್ಗಮ್ಮ ದೇವಸ್ಥಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು ಪ್ರತಿ ದಿನದಂತೆ ಈ ದಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಿತ ದುರ್ಯೋಧನನ ಗರ್ವಭಂಗ ಅರ್ಥಾತ್ ರೌದ್ರ ಬೀಮನ ಅಟ್ಟಹಾಸ (ರಕ್ತರಾತ್ರಿ) ಎಂಬ ಪೌರಾಣಿಕ ನಾಟಕವನ್ನು ಸೆಪ್ಟಂಬರ್ 24ರಂದು ಬುಧವಾರ ಸಂಜೆ ಎಲಿವಾಳ ಸಿದ್ದಯ್ಯ ಕಲಾ ಬಳಗದ ವತಿಯಿಂದ ಪ್ರಸ್ತುತಪಡಿಸಲಾಯಿತು.
ಅಖಂಡ ಬಳ್ಳಾರಿ ಜಿಲ್ಲೆಯ ಮೇರು ಪ್ರತಿಭಾವಂತರಾದ ಹಾರ್ಮೋನಿಯಂ ಕೀಬೋರ್ಡ್ ಸಂಗೀತ ಕಲಾವಿದರಾದ ಸೂಲದಳ್ಳಿ ತಿಪ್ಪೇಸ್ವಾಮಿ ಮತ್ತು ತಬಲಾ ಕಲಾವಿದರಾದ ಮೋರಿಗೇರಿ ವಿರುಪಾಕ್ಷಪ್ಪನವರು ಸಂಗೀತವನ್ನು ನಡೆಸಿಕೊಟ್ಟರು.
ಈ ರಂಗ ಸಜ್ಜಿಕೆಯ ಮೇಲೆ ಮಾತನಾಡಿದ, ಸಿಲಾರ್ ಸಾಬ್ ಅವರು ಬಳ್ಳಾರಿ ರಂಗಭೂಮಿಗೆ ಕೀರ್ತಿ ತಂದ ಯಲಿವಾಳ ಸಿದ್ಧಯ್ಯಸ್ವಾಮಿಯವರ ಮಾರ್ಗದರ್ಶನದಲ್ಲಿ ಬಳ್ಳಾರಿ ಜಿಲ್ಲೆಯ ನಾಟಕ ಕಲಾವಿದರೆಲ್ಲರೂ ಮುನ್ನಡೆಯುತ್ತಿದ್ದೇವೆ ಅದಕ್ಕಿಂತ ಮಿಗಿಲಾಗಿ ಇಂದು ವೀರ ಅಶ್ವತ್ಥಾಮನ ಪಾತ್ರದಲ್ಲಿ ಅಭಿನಯಿಸಿದ ತಿಮ್ಮನಗೌಡರ ವಾಚಿಕ, ಸಾತ್ವಿಕ, ಆಂಗಿಕಾಭಿನಯ ಯುವ ಕಲಾವಿದರಿಗೆ ದಾರಿದೀಪವಾಗಬೇಕು, ನಮ್ಮ ಅಭಿನಯ ಕಲಾಕೇಂದ್ರದ ನಾಟಕಗಳಲ್ಲಿ ಅಭಿನಯಸಿದ ಜ್ಯೋತಿ, ವೀಣಾ, ಚಿಲಾರ್ ಸಾಬ್, ಅಮರೇಶ, ಮಹೇಶ್, ಗಂಗಾಧರ ಅಭಿನಂದನ ಅರ್ಹರು ಇತ್ತೀಚೆಗೆ ಶಕುನಿ ಪಾತ್ರದಲ್ಲಿ ಜನಪ್ರಿಯರಾಗಿರುವ ಪ್ರಕಾಶ್ ಕುದಾಪುರ, ಪ್ರಥಮ ಬಾರಿಗೆ ಕೃಷ್ಣನ ಪಾತ್ರವಹಿಸಿದ ತಿಪ್ಪೇರುದ್ರಪ್ಪ ಅವರು ಶಕ್ತಿಮೀರಿ ಪಾತ್ರಕ್ಕೆ ಕಳೆ ತುಂಬಿದ್ದಾರೆ, ನೃತ್ಯಗಾರ್ತಿಯಾಗಿ ಜನಪ್ರಿಯವಾಗಿರುವ ಮೌನೇಶ್, ಜಡೆಪ್ಪ, ಶಿವರುದ್ರಯ್ಯ ಸ್ವಾಮಿ ಇವರೆಲ್ಲರನ್ನು ಇಂದು ಒಟ್ಟಾಗಿ ಕಾಣುವ ಅವಕಾಶ ಸಿಕ್ಕಿತು. ನೇಪಥ್ಯ ಕಲಾವಿದರಾದ ನಾಡಂಗ ಬಸವರಾಜರ ಅಕಾಲಿಕ ಮರಣದ ನಂತರ ಅವರ ಸ್ಥಾನವನ್ನು ತುಂಬುವ ಸಾಮರ್ಥ್ಯವುಳ್ಳ ಶ್ರಮಜೀವಿ ಜವಳಗೇರ ಬಸಯ್ಯಸ್ವಾಮಿಯವರು ಇಂದು ಪಾತ್ರ ಮಾಡುವುದರ ಜೊತೆಗೆ ರಂಗಸಜ್ಜಿಕೆಯನ್ನು ನಿರ್ವಹಿಸಿದರು.
ಒಟ್ಟಿನಲ್ಲಿ ಇವರೆಲ್ಲರೂ ಸಹಕಾರದಿಂದ ಇಂದು ದುರ್ಯೋಧನನ ಗರ್ವಭಂಗ ಅರ್ಥಾತ್ ರೌದ್ರ ಬೀಮನ ಹಟ್ಟಹಾಸ ಎಂಬ ಪೌರಾಣಿಕ ನಾಟಕ ದುರ್ಗಾ ಕಾಲೋನಿಯ ಜನರ ಮನಸೂರೆಗೊಂಡಿತು.


