ಮೈಸೂರು,17: ದಕ್ಷಿಣ ಶಿಕ್ಷಕರ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಕೆ.ವಿವೇಕಾನಂದ ಪರ ಒಗ್ಗಟ್ಟಿನ ಹೋರಾಟಕ್ಕೆ ಬಿಜೆಪಿ-ಜೆಡಿಎಸ್ ಸಜ್ಜಾಗುತ್ತಿರುವ ನಡುವಲ್ಲೇ ಮತ್ತೊಂದೆಡೆ ಬಂಡಾಯ ಬಿಸಿ ತಟ್ಟಲು ಆರಂಭಿಸಿದೆ.
ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಜೆಡಿಎಸ್ ಮುಖಂಡ, ಎಂಎಲ್ ಸಿ ಕೆ.ಟಿ.ಶ್ರೀಕಂಠೇಗೌಡ ಅವರು ಅಸಮಾಧಾನಗೊಂಡಿದ್ದು, ಪತ್ಯೇಕವಾಹಗಿ ನಾಮಪತ್ರ ಸಲ್ಲಿಸಲು ನಿರ್ಧರಿಸಿದ್ದರು. ಇದಕ್ಕೆ ಸಂಬಂಧಿಸಿ ಮೈಸೂರಿನ ಆಲಮ್ಮ ಕಲ್ಯಾಣ ಮಂಟಪದಲ್ಲಿ ತಮ್ಮ ಬೆಂಬಲಿಗರ ಸಭೆ ಕರೆದು, ಪಕ್ಷೇತರ ಸ್ಪರ್ಧೆಯ ಬಗ್ಗೆ ಹೇಳಿಕೆ ನೀಡಿದ್ದರು.
ಈ ವಿಚಾರ ತಿಳಿದ ತಿಳಿದ ಜೆಡಿಎಸ್ ಉನ್ನತಾಧಿಕಾರ ಸಮಿತಿ ಅಧ್ಯಕ್ಷ ಹಾಗೂ ಚಾಮುಂಡೇಶ್ವರಿ ಶಾಸಕ ಜಿ.ಟಿ.ದೇವೇಗೌಡ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಕಾರ್ಯಾಧ್ಯಕ್ಷ ಸಾ.ರಾ.ಮಹೇಶ್ ಮತ್ತಿತರರು ಸ್ಥಳಕ್ಕೆ ದೌಡಾಯಿಸಿ, ಮನವೊಲಿಸುವ ಯತ್ನ ಮಾಡಿದರು. ಈ ವೇಳೆ ಜೆಡಿಎಸ್ ಕಾರ್ಯಕರ್ತರು ಹಾಗೂ ಶ್ರೀಕಂಠೇಗೌಡ ಅವರ ಬೆಂಬಲಿಗರ ನಡುವೆ ಮಾತಿನ ಚಕಮಕಿ ಶುರುವಾಗಿ, ಹೈಡ್ರಾಮಾ ನಡೆಯಿತು.
ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಅರ್ಹರಲ್ಲದವರನ್ನು ಕಣಕ್ಕಿಳಿಸಲಾಗಿದೆ. ಶ್ರೀಕಂಠೇಗೌಡ ಅವರು ಶಿಕ್ಷಕರಾಗಿದ್ದು, ಪ್ರಾಂಶುಪಾಲರ ಸಂಘದ ಅಧ್ಯಕ್ಷರಾಗಿದ್ದರು. ಅವರು ಸ್ವತಂತ್ರವಾಗಿ ಸ್ಪರ್ಧಿಸಬೇಕು’ ಎಂದು ಶ್ರೀಕಂಠೇಗೌಡ ಬೆಂಬಲಿಗರು ಹೇಳಿದರು.
ಇದೇ ವೇಳೆ, ಮತ್ತೊಂದು ಗುಂಪಿನ ಮುಖಂಡರು ಶ್ರೀಕಂಠೇಗೌಡರು ಪಕ್ಷದ ಮೌಲ್ಯಗಳ ಪಾಲನೆ ಮಾಡಬೇಕೇ ವಿನಃ ವಿರೋಧ ಪಕ್ಷದ ಅಭ್ಯರ್ಥಿಗಳ ಕೈಗೊಂಬೆಯಾಗಬಾರದು ಎಂದು ಹೇಳಿದರು.
ಬಳಿಕ ಜೆಡಿಎಸ್ ಕಾರ್ಯಕರ್ತರು ಶ್ರೀಕಂಠೇಗೌಡ ನಿರ್ಧಾರವನ್ನು ವಿರೋಧಿಸಿದ್ದು, ಪಕ್ಷೇತರ ಸ್ಪರ್ಧೆ ಮಾಡದಂತೆ ಎಳೆದಾಡಿದರು. ಇದರಿಂದ ಸಭೆಯಲ್ಲಿ ಗದ್ದಲ ಉಂಟಾಗಿದ್ದು, ಎಳೆದಾಟದಿಂದಾಗಿ ದೈಹಿಕವಾಗಿ ಬಳಲಿದಂತಾಗಿ ಗಾಯಗೊಂಡ ಶ್ರೀಕಂಠೇಗೌಡರನ್ನು ನೇರವಾಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಇದರಿಂದ ಇತ್ತ ಬಂಡಾಯ ನಾಮಪತ್ರ ಸಲ್ಲಿಕೆ ಸಾಧ್ಯವಾಗಲಿಲ್ಲ. ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ಗುರುವಾರ ಮೇ 16 ಕಡೆಯ ದಿನವಾಗಿತ್ತು.
ಈ ನಡುವೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ನಗರ ಬಿಜೆಪಿ ಅಧ್ಯಕ್ಷ ಎಲ್.ನರೇಂದ್ರ ಮತ್ತಿತರರು ನಿಂಗರಾಜು ಅವರೊಂದಿಗೆ ಸಭೆ ನಡೆಸಿ ಪತ್ರ ಹಿಂಪಡೆಯುವಂತೆ ಮನವಿ ಮಾಡಿಕೊಂಡರು. ನಿಂಗರಾಜು ವಿವೇಕಾನಂದರ ಗೆಲುವಿಗೆ ಶ್ರಮಿಸಲಿದ್ದಾರೆ ಎಂದು ಅಶೋಕ್ ಹೇಳಿದರು.
ಬಿಜೆಪಿಯು ನಿಂಗಂರಾಜು ಅವರನ್ನು ಬಿಜೆಪಿ ಅಭ್ಯರ್ಥಿ ಎಂದು ಘೋಷಿಸಿ ನಂತರ ತನ್ನ ಮಿತ್ರ ಪಕ್ಷ ಜೆಡಿಎಸ್‌ಗೆ ಸ್ಥಾನ ಬಿಟ್ಟುಕೊಟ್ಟಿತ್ತು.