ಬಳ್ಳಾರಿ 24: ಬಸವೇಶ್ವರನಗರದ ರಾಷ್ಟ್ರೀಯ ಬಸವದಳ ಮತ್ತು ಅಕ್ಕನಾಗಲಾಂಬಿಕಾ ಮಹಿಳಾ ಗಣದ ಸಹಭಾಗಿತ್ವದಲ್ಲಿ ದಿನಾಂಕ 23:04:2024 ಮಂಗಳವಾರ ಸಾಯಂಕಾಲ ವೀರವಿರಾಗಿಣಿ ಅಕ್ಕಮಹಾದೇವಿ ತಾಯಿಯವರ ಜಯಂತ್ಯೋತ್ಸವ ಮತ್ತು ಮಹಿಳಾ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು .
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಮಾಜಸೇವೆಯ ವಿಭಾಗದಲ್ಲಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ ಶರಣೆ ಡಾ. ಗೌರಿ ಮಾಣಿಕ್ ಮಾನಸ್ ಅವರು ಉದ್ಘಾಟನಾ ಭಾಷಣವನ್ನು ಮಾಡುತ್ತಾ ….12 ನೆಯ ಶತಮಾನದ ಅಕ್ಕ ಆಧ್ಯಾತ್ಮ ಸರಸಿಯಲ್ಲಿ ಅರಳಿದ ಬೆಳ್ದಾವರೆ , ಮಹಾದೇವಿಯಕ್ಕನ ಚರಿತ್ರೆ ಹೆಣ್ಣಿನ ಗೌರವ ಸಾಧನೆಯ , ಸ್ವತಂತ್ರ್ಯ ಸಾಧನೆಯ , ಪರಮಾರ್ಥ ಸಾಧನೆಯ ಒಂದು ಮಹಾ ಪ್ರಕರಣ ಎಂದು ಹೇಳಿದರು ಮತ್ತು ಮಹಿಳಾ ದಿನಾಚರಣೆಗಳನ್ನು ಆಚರಿಸುವ ಉದ್ದೇಶವನ್ನು ತಿಳಿಸುತ್ತಾ ಮಹಿಳೆ ಸ್ವಾವಲಂಬಿಯಾಗಿ ಬದುಕಲು ಇರುವ ಸರ್ಕಾರದ ಯೋಜನೆಗಳ ಬಗ್ಗೆ ಮಹಿಳೆಯರಿಗೆ ವಿವರಿಸಿ , ಅವುಗಳ ಪ್ರಯೋಜನ ಪಡೆಯುವಂತೆ ತಿಳಿಸಿದರು .
ನಂತರ ಅಕ್ಕನಾಗಲಾಂಬಿಕಾ ಮಹಿಳಾ ಗಣದ ಅಧ್ಯಕ್ಷರಾದಂಥ ಶರಣೆ ಜಿ.ಎಸ್. ಸರ್ವಮಂಗಳಾ ಅವರು ಮಾತನಾಡಿ ಅಕ್ಕನ ಆದರ್ಶಗಳ ಬಗ್ಗೆ ವಿವರಿಸಿ , ಮಹಿಳೆ ಸಿಕ್ಕಿರುವ ಸ್ವತಂತ್ರ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕೇ ಹೊರತು ಸ್ವೇಚ್ಛಾಚಾರವಾಗಿ ಬಳಸುವುದು ಬೇಡ ಎಂದು ತಿಳಿಸಿದರು ಮತ್ತು ಅಕ್ಕನಾಗಲಾಂಬಿಕಾ ಮಹಿಳಾ ಗಣದ ಕಾರ್ಯವೈಖರಿಯನ್ನು ವಿವರಿಸಿದರು .
ಮಹಿಳಾ ದಿನದ ಪ್ರಯುಕ್ತ , ತಮ್ಮ ಆರೋಗ್ಯವನ್ನು ಪಣಕ್ಕಿಟ್ಟು ನಗರದ ಸ್ವಾಸ್ಥ್ಯವನ್ನು ಕಾಪಾಡುವ ಆರು ಜನ ಮಹಿಳಾ ಪೌರ ಕಾರ್ಮಿಕರನ್ನು ಆದರದಿಂದ ಸನ್ಮಾನಿಸಲಾಯಿತು . ಮಹಿಳಾ ಗಣದ ಕಾರ್ಯದರ್ಶಿಯಾದಂಥ ಶರಣೆ ಸುಜಾತ ರವಿಶಂಕರ್ ಅವರು ಮಾತನಾಡಿ ಪೌರ ಕಾರ್ಮಿಕರ ಅಪರಿಮಿತ ಸೇವೆಯನ್ನು ಶ್ಲಾಘಿಸಿದರು .
ನಂತರ ಅಲ್ಲಂ ಸುಮಂಗಳಮ್ಮ ಮಹಿಳಾ ವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾದಂಥ ಶರಣೆ ಕಾತ್ಯಾಯಿನಿ ಮರಿದೇವಯ್ಯ ಅವರು ಮತ್ತು ನಗರಸಭೆಯ ಸದಸ್ಯರಾದಂಥ ಶರಣೆ ಸುರೇಖ ಮಲ್ಲನ ಗೌಡ ಅವರೂ ಮಾತನಾಡಿ ಮಹಿಳೆಯರಿಗೆ ಹಿತವಚನಗಳನ್ನು ಹೇಳಿದರು . ಶರಣೆ ಡಾ. ರೇಣುಕಾ ಮಂಜುನಾಥ್ ಅವರೂ ವೇದಿಕೆಯ ಮೇಲೆ ಆಸೀನರಾಗಿದ್ದರು . ನಂತರ ಶರಣೆ ಡಾ. ವೀಣಾ ಅವರಿಂದ ನೃತ್ಯ ಕಾರ್ಯಕ್ರಮ ನಡೆಯಿತು ಹಾಗೂ ಮಹಿಳಾ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ವಚನ ಗಾಯನ , ಶರಣರ ಕುರಿತ ಭಾಷಣ ಮತ್ತು ಏಕ್ ಮಿನಿಟ್ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು .
ರಾಷ್ಟ್ರೀಯ ಬಸವದಳದ ಹಿರಿಯ ಸದಸ್ಯೆ ಶರಣೆ ವಚನಶ್ರೀ ವೇದಿಕೆಯಲ್ಲಿ ಆಸೀನರಾಗಿದ್ದರು ಮತ್ತು ಗಣದ ಸದಸ್ಯೆಯರಾದಂಥ ಉಮಾ ಮಲ್ಲಿಕಾರ್ಜುನ , ಸವಿತಾ ಸತೀಶ್ ಬಾಬು , ಶೈಲಾ ನಾಡಗೌಡ , ಉಷಾ ತಿಪ್ಪೇಸ್ವಾಮಿ , ಉಷಾ ಮೋದಿ ಯವರು ಹಾಜರಿದ್ದರು .
ರಾಷ್ಟ್ರೀಯ ಬಸವದಳದ ಹಾಗೂ ಅಕ್ಕನಾಗಲಾಂಬಿಕಾ ಮಹಿಳಾ ಗಣದ ನೂರಾರು ಸದಸ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು .