ವಯನಾಡ್(ಕೇರಳ): ಭಾರೀ ಭೂ ಕುಸಿತಕ್ಕೊಳಗಾಗಿರುವ ವಯನಾಡ್ ಜಿಲ್ಲೆಗೆ ತೆರಳುತ್ತಿದ್ದಾಗ ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರಿದ್ದ ವಾಹನ ಅಪಘಾತಕ್ಕೀಡಾದ ಘಟನೆ ಇಂದು ಬೆಳಗ್ಗೆ ನಡೆದಿದೆ.
ಪೊಲೀಸರ ಪ್ರಕಾರ, ಸಚಿವೆ ಇದ್ದ ವಾಹನ ಬೆಳಗ್ಗೆ 7.10ರ ಸುಮಾರಿಗೆ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿದೆ. ಘಟನೆಯ ಬಳಿಕ ತಕ್ಷಣ ಸಚಿವೆಯನ್ನು ಮಂಜೆರಿಯಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಗಿದೆ. ಸಚಿವೆಗೆ ಯಾವುದೇ ರೀತಿ ಗಂಭೀರ ಗಾಯಗಳಾಗಿಲ್ಲ. ದ್ವಿಚಕ್ರ ವಾಹನ ಸವಾರರಿಗೂ ಚಿಕಿತ್ಸೆ ನೀಡಲಾಗಿದೆ.
2ನೇ ದಿನದ ಕಾರ್ಯಾಚರಣೆ: ಇನ್ನು, ಭೂಕುಸಿತ ಸ್ಥಳಗಳಲ್ಲಿ ರಕ್ಷಣಾ ಕಾರ್ಯ ಎರಡನೇ ದಿನಕ್ಕೆ ಕಾಲಿಟ್ಟಿದೆ. ಸೇನೆ, ಎನ್ಡಿಆರ್ಎಫ್ ಮತ್ತು ಇತರೆ ತುರ್ತು ಸೇವಾ ಸಿಬ್ಬಂದಿ ಸಂತ್ರಸ್ತರ ಶೋಧ ಕಾರ್ಯಾಚರಣೆ ಮುಂದುವರೆಸಿದ್ದಾರೆ.
ಹಾನಿಗೊಂಡ ಮನೆಗಳು, ಕಟ್ಟಡದ ಅವಶೇಷಗಳಡಿ ಸಿಲುಕಿರುವ ಜನರ ಪತ್ತೆ ಮತ್ತು ಭೂ ಕುಸಿತದಿಂದ ಪ್ರಾಣ ಉಳಿಸಿಕೊಂಡವರ ರಕ್ಷಣಾ ಕಾರ್ಯ ಸಾಗುತ್ತಿದೆ. ಮೆಪ್ಪಾಡಿಯ ಸ್ಥಳೀಯ ಶಾಲೆಯಲ್ಲಿ ಬೀಡುಬಿಟ್ಟಿದ್ದ ಭೂಸೇನೆಯ 122 ಇನ್ಫಂಟ್ರಿ ಬ್ಯಾಟಲಿಯನ್ ಸೈನಿಕರು ವಿಪತ್ತುಪೀಡಿತ ಪ್ರದೇಶಗಳಿಗೆ ತೆರಳಿದ್ದಾರೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.