ನಾನು ಮತ್ತು ಗುಂಡ ಚಿತ್ರದ ಖ್ಯಾತಿಯ ನಿರ್ದೇಶಕ ಶ್ರೀನಿವಾಸ್ ತಿಮ್ಮಯ್ಯ ನಿರ್ದೇಶನದ ನೂತನ ಚಿತ್ರ ‘ವರ್ಣವೇದಂ’. ಈ ಚಿತ್ರದ
ಶೀರ್ಷಿಕೆ ಗೀತೆಯ ಚಿತ್ರೀಕರಣ ಕನಕಪುರ ರಸ್ತೆಯಲ್ಲಿ ಮಹಮ್ಮದ್ ಗೌಸ್ ಅವರು ನಿರ್ಮಿಸಿರುವ ಬೆಂಗಳೂರು ಫಿಲಂ ಸಿಟಿ ನೂತನ ಸ್ಟುಡಿಯೋದಲ್ಲಿ ನಡೆಯಿತು.
ಹಾಡು ಹಾಗೂ ಚಿತ್ರದ ಕುರಿತು ಚಿತ್ರತಂಡದವರು ಮಾತನಾಡಿದರು.
“ನಾನು ಮತ್ತು ಗುಂಡ” ಚಿತ್ರದ ನಂತರ ನಾನು ನಿರ್ದೇಶಿಸುತ್ತಿರುವ ಚಿತ್ರವಿದು. ಶ್ರೀನಿವಾಸ್ ತಿಮ್ಮಯ್ಯ ಫಿಲಂ ಫ್ಯಾಕ್ಟರಿ ಲಾಂಛನದಲ್ಲಿ ಚಂದ್ರಶೇಖರ್, ವಿಶ್ವನಾಥ್, ಶೈಜು ಹಾಗೂ ರಾಜೇಶ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಸುಸಜ್ಜಿತ ಬೆಂಗಳೂರು ಫಿಲಂ ಸಿಟಿ ಸ್ಟುಡಿಯೋದಲ್ಲಿ ಚಿತ್ರೀಕರಣವಾಗುತ್ತಿರುವ ಮೊದಲ ಚಿತ್ರವಿದು. ನಾಯಕ ನೈಋತ್ಯ ಹಾಗೂ ನಾಯಕಿ ಪ್ರತೀಕ್ಷ ಈ ಹಾಡಿನಲ್ಲಿ ಅಭಿನಯಿಸುತ್ತಿದ್ದು, ಮೋಯಿನ್ ಮಾಸ್ಟರ್ ನೃತ್ಯ ಸಂಯೋಜಿಸುತ್ತಿದ್ದಾರೆ. ಗಗನ್ ಭಡೇರಿಯಾ ಸಂಗೀತ ಸಂಯೋಜಿಸಿರುವ ಈ ಹಾಡನ್ನು ರಜತ್ ಹೆಗಡೆ ಹಾಗೂ ತನುಷಾ ಹಾಡಿದ್ದಾರೆ. ‘ವರ್ಣವೇ ವರ್ಣವೇ’ ಎಂಬ ಈ ಶೀರ್ಷಿಕೆ ಗೀತೆಯನ್ನು ಪ್ರತಾಪ್ ಭಟ್ ಬರೆದಿದ್ದಾರೆ.
ಈಗಾಗಲೇ ಚಿತ್ರೀಕರಣ ಮುಕ್ತಾಯ ಹಂತ ತಲುಪಿದೆ ಇನ್ನೆರೆಡು ಹಾಡು ಹಾಗೂ ಒಂದು ಸಾಹಸ ಸನ್ನಿವೇಶದ ಚಿತ್ರೀಕರಣ ಮಾತ್ರ ಬಾಕಿಯಿದೆ. ‘ವರ್ಣವೇದಂ’ ಬಣ್ಣದ ಬಗ್ಗೆಗಿನ ಸಿನಿಮಾ. ಕಲರ್ ಮಾಫಿಯಾ ಚಿತ್ರದ ಪ್ರಮುಖ ಕಥಾವಸ್ತು. ಹಾಗೆ ಚಿತ್ರದ ನಾಯಕಿಯ ಹೆಸರು ವರ್ಣ ಹಾಗೂ ನಾಯಕನ ಹೆಸರು ವೇದಾಂತ್. ನೋಡುಗನಿಗೆ ಬೇಕಾದ ಎಲ್ಲಾ ಅಂಶಗಳನ್ನೊಳಗೊಂಡ ಸದಭಿರುಚಿಯ ಚಿತ್ರವಿದು” ಎಂದು ತಿಳಿಸಿದರು ನಿರ್ದೇಶಕರು.
“ಮೂಲತಃ ರಂಗಭೂಮಿ ಕಲಾವಿದನಾಗಿರುವ ನನಗೆ ಇದು ನಾಯಕನಾಗಿ ಮೊದಲ ಚಿತ್ರ. ವೇದಾಂತ್ ನನ್ನ ಪಾತ್ರದ ಹೆಸರು. ಚಿತ್ರದಲ್ಲಿ ನಾನು ಮ್ಯುಸಿಷಿಯನ್” ಎಂದರು ನಾಯಕ ನೈಋತ್ಯ. “ಮೂಲತಃ ಮಂಗಳೂರಿನವಳಾದ ನನಗೆ ಇದು ಚೊಚ್ಚಲ ಚಿತ್ರ. ವರ್ಣ ನನ್ನ ಪಾತ್ರದ ಹೆಸರು” ಎಂದರು ನಾಯಕಿ ಪ್ರತೀಕ್ಷ. “ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ” ಎಂದರು ನಿರ್ಮಾಪಕರಾದ ವಿಶ್ವನಾಥ್, ಚಂದ್ರಶೇಖರ್, ಶೈಜು, ಭೀಮೇಶ್, ರಾಜೇಶ್. ನೃತ್ಯ ನಿರ್ದೇಶಕ ಮೋಯಿನ್, ಸ್ಟುಡಿಯೋ ಮಾಲೀಕ ಮಹಮ್ಮದ್ ಗೌಸ್ ಹಾಗೂ ಛಾಯಾಗ್ರಾಹಕ ಚಿದಾನಂದ್ ‘ವರ್ಣವೇದಂ’ ಬಗ್ಗೆ ಮಾಹಿತಿ ನೀಡಿದರು.