ಗೋಕಾಕ: ಸ್ಥಳೀಯ ಕ್ರೀಡಾಪಟುಗಳಿಗೆ ತಮ್ಮ ಕ್ರೀಡೆಗಳನ್ನು ಪ್ರದರ್ಶಿಸಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಇಲ್ಲಿನ ವಾಲ್ಮೀಕಿ ಕ್ರೀಡಾಂಗಣಕ್ಕೆ ಮೂಲ ಸೌಕರ್ಯಗಳನ್ನು ಒದಗಿಸಿ ಅಭಿವೃದ್ಧಿಗೊಳಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.
ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಕೆ.ಬಿ ಗ್ರೂಪ್ ನಿಂದ ಆಯೋಜಿಸಿದ್ದ 2025-2026ನೇ ಸಾಲಿನ ಶ್ರೀ ಲಕ್ಷ್ಮಣರಾವ್ ಆರ್. ಜಾರಕಿಹೊಳಿ ಮೆಮೋರಿಯಲ್ ಸ್ಮಾರಕ್ ಕ್ರಿಕೆಟ್ ಟ್ರೋಫಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸ್ಥಳೀಯ ಕ್ರೀಡಾಪಟುಗಳೆಲ್ಲರೂ ಬೆಂಗಳೂರಿಗೆ ಹೋಗಿ ಆಟ ಆಡಲು ಆಗುವುದಿಲ್ಲ. ನಗರಗಳಲ್ಲಿ ಸಿಗುವ ಸೌಲಭ್ಯಗಳು ಸ್ಥಳೀಯ ಕ್ರೀಡಾಪಟುಗಳಿಗೆ ದೊರಕಲೆಂಬ ಉದ್ದೇಶದಿಂದ ತಾಲೂಕು ಮಟ್ಟದಲ್ಲಿಯೇ ಕಡಿಮೆ ಖರ್ಚಿನಲ್ಲಿ ವಾಲ್ಮೀಕಿ ಕ್ರೀಡಾಂಗಣಕ್ಕೆ ಲೈಟಿಂಗ್ ವೈವಸ್ಥೆ ಮಾಡಿದ್ದೇವೆ. ಬೆಳಗಾವಿಯಲ್ಲಿಯೂ 50 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ ಮಾಡುತ್ತಿದ್ದೇವೆ. ಗೋಕಾಕನಲ್ಲಿ ಮೊದಲು ಕ್ರಿಕೆಟ್ ಗೆ ಅಷ್ಟೇ ಆದ್ಯತೆ ನೀಡುತ್ತಿದ್ದೇವು, ಆದರೆ ಇತ್ತಿಚೀನ ದಿನಗಳಲ್ಲಿ ಎಲ್ಲಾ ಕ್ರೀಡೆಗಳಿಗೆ ಆದ್ಯತೆ ನೀಡುತ್ತಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಧಾರವಾಡ ವಲಯ ನಿಮಂತ್ರಕ ವೀರಣ್ಣ ಸವಡಿ, ಬಿಡಿಸಿಸಿ ಬ್ಯಾಂಕ್, ಕೆಪಿಸಿಸಿ ಯುವ ಘಟಕದ ಪ್ರಧಾನ ಕಾರ್ಯದರ್ಶಿ ರಾಹುಲ್ ಜಾರಕಿಹೊಳಿ, ಆದಿತ್ಯ ಜಾರಕಿಹೊಳಿ, ಕಿಶೋರ ಶೆಟ್ಟಿ, ಬಸವರಾಜ ಕಲ್ಯಾಣ ಶೆಟ್ಟಿ, ಹಿರೇಗೌಡ ನಾಯ್ಕರ್, ಶಿವಾನಂದ ಗುಂಜಾಲ್, ಅನಿಲ್ ಭವಾನಿ, ಶಿಶಿರ ಭವಾನಿ ಸೇರಿದಂತೆ ಹಲವರಿದ್ದರು.
ಗಮನ ಸೆಳೆದ ಜಾರಕಿಹೊಳಿ ಸಹೋದರರ ಕ್ರಿಕೆಟ್ ಆಟ: ವಾಲ್ಮೀಕಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 2025-2026ನೇ ಸಾಲಿನ ಶ್ರೀ ಲಕ್ಷ್ಮಣರಾವ್ ಆರ್. ಜಾರಕಿಹೊಳಿ ಮೆಮೋರಿಯಲ್ ಸ್ಮಾರಕ್ ಕ್ರಿಕೆಟ್ ಟ್ರೋಫಿಗೆ ಚಾಲನೆ ನೀಡಿದ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ಬ್ಯಾಟಿಂಗ್ ಮಾಡಿದರೆ ಸಹೋದರ ಲಖನ್ ಜಾರಕಿಹೊಳಿ ಬಾಲಿಂಗ್ ಮಾಡಿ ಸ್ಥಳದಲ್ಲಿ ಸಾರ್ವಜನಿಕರ ಗಮನ ಸೆಳೆದರು.


