ಬೆಂಗಳೂರು, ಜೂನ್ 08: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಯಾವುದೇ ಸಾಕ್ಷ್ಯ ನಾಶ ಮಾಡಿಲ್ಲ ಎಂದು ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಹೇಳಿದರು. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇದು ಕಂಪ್ಯೂಟರ್ ಯುಗ, ಎಲ್ಲವೂ ಕೂಡ ಅದರಲ್ಲೇ ಇರುತ್ತದೆ. ಹೀಗಿರುವಾಗ ನಾನು ಹೇಗೆ ಸಾಕ್ಷಿ ನಾಶಪಡಿಸುವುದಕ್ಕೆ ಆಗುತ್ತೆ. ಪ್ರತಿಪಕ್ಷದವರು ನನ್ನ ರಾಜೀನಾಮೆ ಕೇಳುತ್ತಿದ್ದಾರೆ, ಅದು ಅವರ ಧರ್ಮ. ತನಿಖೆಗೆ ನಾನು ಸಹಕಾರ ಕೊಡುತ್ತೇನೆ, ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ ಎಂದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮದಲ್ಲಿ ನನ್ನ ಪಾತ್ರವಿಲ್ಲ. ಮುಖ್ಯಮಂತ್ರಿಗಳು ರಾಜೀನಾಮೆ ಕೇಳಿದರೆ ನಾನು ಕೊಡಲು ಸಿದ್ಧನಿದ್ದೇನೆ. ರಿವ್ಯೂವ್ ಸಭೆ ಮಾಡುವ ಅಧಿಕಾರ ಅಧಿಕಾರಿಗಳಿಗೆ ಇರುತ್ತದೆ. ನೀತಿ ಸಂಹಿತೆ ಇದ್ದಿದ್ದರಿಂದ ನಾನು ಯಾವುದೇ ಸಭೆ ಮಾಡಿಲ್ಲ. ಅಂತಾರಾಜ್ಯಗಳಿಗೆ ಹಣ ವರ್ಗಾವಣೆ ಆಗಿರುವ ಬಗ್ಗೆ ಮಾಹಿತಿ ಇದೆ. ಆ ಹಣವನ್ನು ವಾಪಸ್ ತರುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಇದು ಪರಿಶಿಷ್ಟ ಪಂಗಡಗಳಿಗೆ ಸೇರಿದ ಹಣ. ನೂರಕ್ಕೆ ನೂರರಷ್ಟು ಹಣವನ್ನು ತಂದೇ ತರುತ್ತೇವೆ ಎಂದು ಹೇಳಿದರು.