ಚಂದನವನದಲ್ಲಿ ಜನರನ್ನು ಚಿತ್ರಮಂದಿರಕ್ಕೆ ಕರೆತರಲು ಆಕರ್ಷಕ ಟೈಟಲ್‌ಗಳು ಕಾರಣವಾಗಿರುತ್ತದೆ. ಆ ಸಾಲಿಗೆ ಹೊಸಬರ ‘ವಲವಾರ’ ಎಂಬ ಮಕ್ಕಳ ಸಿನಿಮಾವೊಂದು ಸಿದ್ದಗೊಂಡಿದೆ. ಹೊಸ ಅಲೆಯ ಚಿತ್ರಗಳನ್ನು ನಿರ್ಮಿಸುವ ಧ್ಯೇಯದಿಂದ ಮಾರ್ಫ್ ಪ್ರೊಡಕ್ಷನ್ಸ್ ಅಡಿಯಲ್ಲಿ ಗಿರಿಧರ್.ಜೆ ಮತ್ತು ಅನಿರುದ್ ಗೌತಂ ಬಂಡವಾಳ ಹೂಡಿದ್ದಾರೆ. ಮಾಯಾಬಜಾರ್, ಐರಾವತ, ರಾಟೆ, ಜ್ಯೂನಿಯರ್ ಚಿತ್ರಗಳ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿರುವ ಸಕಲೇಶಪುರದ ಪ್ರತಿಭೆ ಸುತನ್ ಗೌಡ ಸಿನಿಮಾಕ್ಕೆ ಕಥೆ,ಚಿತ್ರಕಥೆ, ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ದಸರಾ ಹಬ್ಬದಂದು ಟ್ರೇಲರ್ ಹಾಗೂ ಒಂದು ಹಾಡನ್ನು ಹೊರಬಿಡಲಾಗಿ, ಎಲ್ಲಾ ಕಡೆಗಳಿಂದ ಉತ್ತಮ ಪ್ರಶಂಸೆಗೆ ಪಾತ್ರವಾಗಿರುವುದು ತಂಡಕ್ಕೆ ಖುಷಿ ತಂದಿದೆ.
ಮುಖ್ಯ ಪಾತ್ರದಲ್ಲಿ ಚಿಣ್ಣರುಗಳಾದ ವೇದಿಕ್ ಕೌಶಲ್, ಶಯನ್. ಪೋಷಕ ಪಾತ್ರಧಾರಿಗಳಾಗಿ ಮಾಲತೇಶ್, ಹರ್ಷಿತಾಗೌಡ, ಅಭಯ್ ಮುಂತಾದವರು ಅಭಿನಯಿಸಿದ್ದಾರೆ. ಸಕಲೇಶಪುರದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಕದ್ರಿ ಮಣಿಕಾಂತ್ ಸಂಗೀತ, ಪ್ರಮೋದ್‌ಮರವಂತೆ ಸಾಹಿತ್ಯ, ಛಾಯಾಗ್ರಹಣ ಬಾಲರಾಜ್‌ಗೌಡ, ಸಂಕಲನ ಶ್ರೀಕಾಂತ್.ಎಸ್.ಹೆಚ್, ಕಾರ್ಯಕಾರಿ ನಿರ್ಮಾಪಕ ಸುಮನ್.ಹೆಚ್.ಎಸ್. ಸಿಂಕ್‌ಸೌಂಡ್ ಆದರ್ಶ್‌ಜೋಸೆಫ್, ಶಬ್ದವಿನ್ಯಾಸ ವಿ.ಜಿ.ರಾಜನ್ ಅವರದ್ದಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿರುವ ನಿರ್ದೇಶಕರು “ನನ್ನ ಬಾಲ್ಯದ ದಿನಗಳಲ್ಲಿ ನಡೆದಂತ ಕೆಲ ಘಟನೆಗಳನ್ನು ಚಿತ್ರಕಥೆಗೆ ಬಳಸಿಕೊಂಡಿದ್ದೇನೆ. ಬಡ ರೈತನ ಕುಟುಂಬದಲ್ಲಿ ಒಂದೇ ದಿನದಲ್ಲಿ ನಡೆಯುವ ಕಥೆ ಇದಾಗಿದ್ದು, ಗೌರ ಎಂಬ ಹಸು ಕೂಡ ಇಲ್ಲಿ ಮುಖ್ಯ ಪಾತ್ರಧಾರಿ. ನೋಡುಗರನ್ನು ಮನರಂಜಿಸುತ್ತಾ ಮುಂದೇನು ಎಂಬ ಕುತೂಹಲ ಹುಟ್ಟಿಸುತ್ತಾ ಸಾಗುವ ಸಿನಿಮಾದಲ್ಲಿ ಬಹುತೇಕ ಹೊಸ ಕಲಾವಿದರನ್ನೇ ಆಯ್ಕೆ ಮಾಡಿಕೊಂಡು ಅವರನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡಿರುವ ಕುರುಹು ಟ್ರೇಲರ್ ನಲ್ಲಿ ಎದ್ದು ಕಾಣುತ್ತದೆ. ಚಿತ್ರಕ್ಕೆ ಸಿಂಕ್ ಸೌಂಡ್ ಬಳಸಿರುವುದು ಮತ್ತೊಂದು ವಿಶೇಷ.
“ಪವರ್‌ಸ್ಟಾರ್ ಪುನೀತ್‌ರಾಜ್‌ಕುಮಾರ್ ಹಾಗೂ ಅಶ್ವಿನಿ ಪುನೀತ್‌ರಾಜ್‌ಕುಮಾರ್ ಕಥೆ ಕೇಳಿ ಮೆಚ್ಚಿಕೊಂಡು ತಮ್ಮದೆ ಪಿಆರ್‌ಕೆ ಬ್ಯಾನರ್‌ನಲ್ಲಿ ನಿರ್ಮಿಸಲು ಉದ್ದೇಶಿಸಿದ್ದರು. ಆದರೆ ಅಪ್ಪು ಸರ್ ಅವರನ್ನು ಕಳೆದುಕೊಂಡು ಅವರ ಬ್ಯಾನರ್ ನಲ್ಲಿ ಸಿನಿಮಾ ಆಗದಿದ್ದಕ್ಕೆ ಬೇಸರವಿದೆ” ಎನ್ನುತ್ತಾರೆ ಸುತನ್‌ಗೌಡ. ಸೆನ್ಸಾರ್ ಮಂಡಳಿಯಿಂದ ’ಯು’ ಪ್ರಮಾಣಪತ್ರ ಪಡೆದಿರುವ ‘ವಲವಾರ’ ಚಿತ್ರವು ನವೆಂಬರ್ ತಿಂಗಳಲ್ಲಿ ಚಿತ್ರಮಂದಿರಗಳಿಗೆ ಲಗ್ಗೆ ಹಾಕಲು ಸಜ್ಜಾಗಿದೆ.