ಬೆಳಗಾವಿ,ಜುಲೈ06: ಎಷ್ಟೋ ಕಷ್ಟ, ನಷ್ಟಗಳು ಬಂದರೂ ಎದೆಗುಂದದೆ ತಮ್ಮ ಜೀವನವನ್ನೇ ವಚನ ಸಾಹಿತ್ಯದ ಸಂರಕ್ಷಣೆಗಾಗಿ ಮುಡಿಪಾಗಿಟ್ಟ ವಚನ ಪಿತಾಮಹ ಡಾ. ಫ.ಗು.ಹಳಕಟ್ಟಿ ಅವರು ನಮಗೆ ಸದಾಕಾಲವೂ ಸ್ಮರಣೀಯರು ಎಂದು ನಾಗನೂರು ರುದ್ರಾಕ್ಷಿ ಮಠದ ಡಾ.ಅಲ್ಲಮಪ್ರಭು ಮಹಾಸ್ವಾಮಿಗಳು ಹೇಳಿದರು.
ಮಹಾಂತೇಶ ನಗರದ ಮಹಾಂತ ಭವನದಲ್ಲಿ ಶುಕ್ರವಾರ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಆಯೋಜಿಸಿದ್ದ ಮಾಸಿಕ ಅನುಭಾವ ಗೋಷ್ಠಿ ಹಾಗೂ ವಚನ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮದ ಸಾನಿಧ್ಯವಹಿಸಿ ಅವರು ಮಾತನಾಡಿದರು.
ಹಲವಾರು ಭಕ್ತರ ಮನೆಯ ಜಗುಲಿಗಳಲ್ಲಿ ಇದ್ದ ವಚನ ಕಟ್ಟುಗಳನ್ನು ಅವರಿಂದ ಬೇಡಿ ಪಡೆದು, ಕೆಲವರಿಗೆ ಹಣ ನೀಡಿ ವಚನಗಳ ಸಂಶೋಧಿಸಿ ಸಂರಕ್ಷಣೆ ಮಾಡಿದ್ದನ್ನು ಗಮನಿಸಿದಾಗ ಅವರ ಸಾಹಿತ್ಯಕ ಚಿಂತನೆ ಅಗಾಧ ಎಂಬುದು ಗೊತ್ತಾಗುತ್ತದೆ. ಹಳಕಟ್ಟಿ ಅವರ ವಚನ ಸಾಧನೆಯಿಂದಾಗಿ ಇವತ್ತು ಕನ್ನಡ ಸಾಹಿತ್ಯ ಲೋಕ ಶ್ರೀಮಂತವಾಗಿದೆ ಎಂದು ಹೇಳಿದರು.
ಸಾಮಾಜಿಕ, ಶೈಕ್ಷಣಿಕ, ಸಾಹಿತ್ಯಿಕ, ರಾಜಕೀಯ,ಆರ್ಥಿಕ ಮುಂತಾದ ಕ್ಷೇತ್ರದಲ್ಲಿ ಹಳಕಟ್ಟಿ ಅವರು ಅನುಪಮ ಸೇವೆಯನ್ನು ಸಲ್ಲಿಸಿದರು. ವಿಜಯಪುರದ ಬಿ.ಎಲ್.ಡಿ. ಸಂಸ್ಥೆಯ, ಸಿದ್ದೇಶ್ವರ ಬ್ಯಾಂಕ, ಹಲವಾರು ಸಹಕಾರಿ ಸಂಘಗಳ ನಿರ್ಮಾಣ ಮಾಡಿದರು. ಇಂದಿನ ರಾಜಕಾರಣಿಗಳು ಹಳಕಟ್ಟಿ ಅವರ ನಿಸ್ವಾರ್ಥ ಸೇವೆಯ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕಾಗಿದೆ. ಬಸವಾದಿ ಶರಣರ ವಚನಗಳನ್ನು ನಮ್ಮ ಮಕ್ಕಳಿಗೆ ತಲುಪಿಸಬೇಕಾದ ಗುರುತರ ಜವಾಬ್ದಾರಿ ನಮ್ಮ ತಾಯಿಂದರ ಮೇಲಿದೆ ಎಂದು ಮಹಾಸ್ವಾಮಿಗಳು ಹೇಳಿದರು.
ಪ್ರೇಮ ಅಂಗಡಿ ಅವರು ಫ.ಗು.ಹಳಕಟ್ಟಿ ಅವರ ಜೀವನ, ಸಾಧನೆಯ ಕುರಿತು ಉಪನ್ಯಾಸ ನೀಡಿದರು. ಮಹಿಳಾ ರತ್ನ ಪ್ರಶಸ್ತಿಗೆ ಭಾಜನರಾದ ಪ್ರೇಮ ಅಂಗಡಿ, ಖ್ಯಾತ ಸಂಗಿತಗಾರ್ತಿ ನೈನಾ ಗಿರಿಗೌಡರ,ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ ಪಡೆದ ವಚನಾ ದೇಸಾಯಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಸವರಾಜ ರೊಟ್ಟಿ ಅವರು ಒಂಭತ್ತನೆಯ ತರಗತಿಯ ಪಠ್ಯದಲ್ಲಿ ಸರಕಾರ, ಪರಿಷ್ಕರಣೆ ಮಾಡಿದ್ದು ಸರಿಯಾಗಿದೆ. ಅದನ್ನೇ ಮುಂದುವರಿಸಬೇಕು. ಯಾವದೇ ಒತ್ತಡಕ್ಕೆ ಮಣಿಯಬಾರದು. ಒಂದು ವೇಳೆ ಒತ್ತಡಕ್ಕೆ ಮಣಿದು ಬದಲಾವಣೆ ಮಾಡಿದಲ್ಲಿ ಉಗ್ರ ಹೋರಾಟ ಮಾಡುವದಾಗಿ ಹೇಳಿದರು.
ಪ್ರಸಾದ ದಾಸೋಹಿ ಸಾವಿತ್ರಿ, ಕಲ್ಲಪ್ಪ ಬೋರನ್ನವರ ದಂಪತಿ ಷಟ್ ಸ್ಥಲ ಧ್ವಜಾರೋಹಣ ನೆರವೇರಿಸಿದರು. ಮಹಾಸಭಾದ ಪ್ರಧಾನ ಕಾರ್ಯದರ್ಶಿ ಅಶೋಕ ಮಳಗಲಿ ಅತಿಥಿಗಳ ಪರಿಚಯದೊಂದಿಗೆ ಸರ್ವರನ್ನು ಸ್ವಾಗತಿಸಿದರು. ಸರಕಾರಿ ಪದವಿ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕರಾದ ಡಾ. ಅಡಿವೇಶ ಇಟಗಿ ಕಾರ್ಯಕ್ರಮ ನಿರೂಪಿಸಿದರು. ಈರಣ್ಣ ಚಿನಗುಡಿ ವಂದಿಸಿದರು.
ಕಾರ್ಯಕ್ರಮದಲ್ಲಿ ಎಸ್.ಜಿ.ಸಿದ್ನಾಳ,ಮೋಹನ ಗುಂಡ್ಲೂರ,ಮುರಿಗೆಪ್ಪ ಬಾಳಿ,ಅರವಿಂದ ಪರುಶೆಟ್ಟಿ,ಬಸವರಾಜ ಮಿಂಡ್ರೊಳ್ಳಿ,ಬಿ.ಎಮ್ ಮತ್ತಿಕೊಪ್ಪ, ಕೆಂಪಣ್ಣ ರಾಮಾಪುರಿ, ಮಹಾಂತೇಶ ತೋರಣಗಟ್ಟಿ, ಪ್ರವೀಣ ಕುಮಾರ ಚಿಕಲಿ, ಪ್ರಕಾಶ ರಾಮಗುರವಾಡಿ, ಶಿವಾನಂದ ನಾಯಿಕ, ಬಿ.ಡಿ.ಪಾಟೀಲ,ಕರಡಿಮಠ,ಸಂಕೇಶ್ವರ ವಕೀಲರು, ಅನ್ನಪೂರ್ಣ ಮಳಗಲಿ, ಸಂಗೀತಾ ಬಾಳಿ, ನೇತ್ರಾ ರಾಮಾಪುರಿ, ಸುಧಾ ರೊಟ್ಟಿ, ಶೋಭಾ ಶಿವಳ್ಳಿ, ಕಮಲಾ ಗಣಾಚಾರಿ, ಭಾರತಿ ರಾಮಗುರವಾಡಿ, ಕಾವೇರಿ ಕಿಲಾರಿ, ಪ್ರೀತಿ ಮಠದ, ಸುನಿತಾ ದೇಸಾಯಿ, ವಿವಿಧ ಬಡಾವಣೆಯ ಬಸವ ಅನುಯಾಯಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.