ಶ್ರೀನಗರ: ನಿರಂತರ ಮಳೆಯಿಂದಾಗಿ ಜಮ್ಮು-ಕಾಶ್ಮೀರದಲ್ಲಿ ನದಿಗಳು ಮತ್ತು ತೊರೆಗಳಲ್ಲಿ ನೀರಿನ ಮಟ್ಟ ಹೆಚ್ಚಿರುವುದರಿಂದ ಪ್ರವಾಹ ಭೀತಿ ಎದುರಾಗಿದೆ. ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಜೆ ನೀಡಲಾಗಿದೆ, ಕಾಶ್ಮೀರವನ್ನು ದೇಶದ ಉಳಿದ ಭಾಗಗಳೊಂದಿಗೆ ಸಂಪರ್ಕಿಸುವ ಏಕೈಕ ರಸ್ತೆ ಸಂಪರ್ಕವಾದ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯನ್ನು ವಾಹನ ಸಂಚಾರಕ್ಕೆ ಮುಚ್ಚಲಾಗಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ನಿನ್ನೆಯಿಂದ ನಿರಂತರ ಮಳೆಯಾಗುತ್ತಿದೆ. ನಿನ್ನೆ ಬೆಳಗ್ಗೆ 8.30 ರಿಂದ ಇಂದು ಬೆಳಿಗ್ಗೆ 5.30 ರವರೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ದಾಖಲೆ ಮಳೆ ಸುರಿದಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಮ್ಮುವಿನಲ್ಲಿ 81 ಮಿ.ಮೀ., ರಿಯಾಸಿ 203 ಮಿ.ಮೀ., ಕತ್ರಾ 193 ಮಿ.ಮೀ., ಸಾಂಬಾ 48 ಮಿ.ಮೀ., ರಾಂಬನ್ 82 ಮಿ.ಮೀ., ಬಡೇರ್ವಾ 96.2 ಮಿ.ಮೀ., ಬಟೋಟ್ 157.3 ಮಿ.ಮೀ., ದೋಡಾ 114 ಮಿ.ಮೀ., ಕಿಶ್ತ್ವಾರ್ 50 ಮಿ.ಮೀ., ಬನಿಹಾಲ್ 95 ಮಿ.ಮೀ., ರಾಜೌರಿ 57.4 ಮಿ.ಮೀ., ಪಹಲ್ಗಾಮ್ 55 ಮಿ.ಮೀ., ಕೊಕರ್ನಾಗ್ 68.2 ಮಿ.ಮೀ., ಶ್ರೀನಗರ ವೀಕ್ಷಣಾಲಯ 32 ಮಿ.ಮೀ. ಮತ್ತು ಖಾಜಿಗುಂಡ್ 68 ಮಿ.ಮೀ. ಮಳೆಯಾಗಿದೆ ಎಂದು ಅವರು ಹೇಳಿದರು.