ನವದೆಹಲಿ: ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್ಸಿ) ಅಧ್ಯಕ್ಷ ಮನೋಜ್ ಸೋನಿ ತಮ್ಮ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ್ದಾರೆ. ಸೋನಿ ಅಧಿಕಾರಾವಧಿಯು 2029ರ ಮೇವರೆಗೆ ಇತ್ತು. ಇದಕ್ಕೂ ಮುನ್ನವೇ ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಅವರು ರಾಜೀನಾಮೆ ನೀಡಿದ್ದಾರೆ ಎಂದು ಅಧಿಕೃತ ಮೂಲಗಳು ಶನಿವಾರ ತಿಳಿಸಿವೆ.
ಮಹಾರಾಷ್ಟ್ರದ ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ವಿವಾದ ಮುನ್ನೆಲೆಗೆ ಬಂದ ಬೆನ್ನಲ್ಲೇ ಯುಪಿಎಸ್ಸಿ ಅಧ್ಯಕ್ಷರು ರಾಜೀನಾಮೆ ಕೊಟ್ಟಿರುವು ಗಮನಾರ್ಹ. ಆದರೆ, ಈ ವಿವಾದ ಮತ್ತು ಆರೋಪಗಳಿಗೆ ಯಾವುದೇ ರೀತಿಯಲ್ಲಿ ಸಂಬಂಧವಿಲ್ಲ. ಯುಪಿಎಸ್ಸಿ ಅಧ್ಯಕ್ಷರು 15 ದಿನಗಳ ಹಿಂದೆ ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ರಾಜೀನಾಮೆ ನೀಡಿದ್ದಾರೆ. ಆದರೆ, ಅದನ್ನು ಇನ್ನೂ ಅಂಗೀಕಾರವಾಗಿಲ್ಲ ಎಂದು ಸುದ್ದಿಸಂಸ್ಥೆ ಪಿಐಟಿ ವರದಿ ಮಾಡಿದೆ.
ಖ್ಯಾತರಾದ ಶಿಕ್ಷಣ ತಜ್ಞರಾದ 59 ವರ್ಷದ ಸೋನಿ 2017ರ ಜೂನ್ 28ರಂದು ಆಯೋಗದ ಸದಸ್ಯರಾಗಿ ಅಧಿಕಾರ ವಹಿಸಿಕೊಂಡಿದ್ದರು. ಬಳಿಕ 2023ರ ಮೇ 16ರಂದು ಆಯೋಗದ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಸದ್ಯ ಯುಪಿಎಸ್ಸಿ ಅಧ್ಯಕ್ಷರಾಗಿ ಮುಂದುವರೆಯಲು ಅವರು ಉತ್ಸುಕರಾಗಿಲ್ಲ. ಸಾಮಾಜಿಕ-ಧಾರ್ಮಿಕ ಚಟುವಟಿಕೆಗಳಿಗೆ ಹೆಚ್ಚಿನ ಸಮಯವನ್ನು ವಿನಿಯೋಗಿಸಲು ಬಯಸಿದ್ದಾರೆ. ಹೀಗಾಗಿ ತಮ್ಮನ್ನು ರಿಲೀವ್ ಮಾಡುವಂತೆ ಮನವಿ ಮಾಡಿದ್ದಾರೆ ಎಂದು ಮೂಲಗಳು ಹೇಳಿವೆ.
ಕೇಂದ್ರ ಲೋಕಸೇವಾ ಆಯೋಗವು ಅಧ್ಯಕ್ಷರ ನೇತೃತ್ವದಲ್ಲಿರುತ್ತದೆ. ಆಯೋಗವು ಗರಿಷ್ಠ ಹತ್ತು ಸದಸ್ಯರನ್ನು ಹೊಂದಬಹುದು. ಆದರೆ, ಯುಪಿಎಸ್ಸಿಯಲ್ಲಿ ಏಳು ಸದಸ್ಯರಿದ್ದಾರೆ. ಮಂಜೂರಾದ ಸಂಖ್ಯೆಗಿಂತ ಮೂವರು ಸದಸ್ಯರು ಕಡಿಮೆ ಇದ್ದಾರೆ. ಇನ್ನು, ಯುಪಿಎಸ್ಸಿಗೂ ಮೊದಲು ಮನೋಜ್ ಸೋನಿ ಮೂರು ಅವಧಿಗೆ ಕುಲಪತಿಯಾಗಿ ಸೇವೆ ಸಲ್ಲಿಸಿದ್ದರು.