ಗದಗ :ಪರಿಶಿಷ್ಟ ಜಾತಿಗಳಲ್ಲಿನ ಅವೈಜ್ಞಾನಿಕ ಒಳಮೀಸಲಾತಿ ವರ್ಗೀಕರಣದ ವಿರುದ್ಧವಾಗಿ ಕರ್ನಾಟಕ ಬಂಜಾರ ಹಕ್ಕು ಸಂರಕ್ಷಣಾ ಸಮಿತಿ ಹಾಗೂ ಜಿಲ್ಲಾ ಬಂಜಾರ ಸಮುದಾಯದ ವಿವಿಧ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ನಗರದ ಗಾಂಧಿ ವೃತ್ತದಲ್ಲಿ ಅಕ್ಟೋಬರ್ 6, 2025 ರಿಂದ ಪ್ರಾರಂಭವಾದ ಬೃಹತ್ ಪ್ರತಿಭಟನೆ ಹಾಗೂ ಅನಿರ್ಧಿಷ್ಟಾವಧಿಯ ಅಹೋರಾತ್ರಿ ಧರಣಿ ಶುಕ್ರವಾರದಂದು 12ನೇ ದಿನಕ್ಕೆ ತಲುಪಿದೆ.
ಗುರುವಾರ ಜಿಲ್ಲೆಯ 72 ತಾಂಡಾಗಳ ಪೈಕಿ ನಿಗದಿತ ವೇಳಾಪಟ್ಟಿಯಂತೆ ಸೇವಾಲಾಲ್ ನಗರ, ಹುಲಕೋಟಿ, ಜಾಲವಾಡಗಿ, ಶೇಟ್ಟಿಗೇರೆ, ನೀಲೋಗಲ್, ದೋಡ್ಡೂರ, ನೆಲ್ಲೂರ ತಾಂಡಾಗಳ ಸಾವಿರಾರು ಬಂಜಾರರು ಧರಣಿ ಸ್ಥಳಕ್ಕೆ ಆಗಮಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಹೋಳಿ ಹಬ್ಬದ ಲೈಂಗಿ ಪದಗಳನ್ನು ಹಾಡುತ್ತಾ, ಕೈಯಲ್ಲಿ ಕೊಲುಗಳನ್ನು ಹಿಡಿದು ನೃತ್ಯವಾಡುತ್ತಾ, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ “ದಂಡ ಚಳುವಳಿ” ಮಾಡುವ ಮೂಲಕ “ಒಳಮೀಸಲಾತಿ ವರ್ಗೀಕರಣದಲ್ಲಿ ಸರ್ಕಾರ ತಾರತಮ್ಯ ತೋರಿದ್ದು, ಬಂಜಾರ ಸಮುದಾಯದ ಮೇಲೆ ಘೋರ ಅನ್ಯಾಯ ಮಾಡಿದೆ” ಎಂದು ಖಂಡಿಸಿದರು.
ಈ ವೇಳೆ ಕರ್ನಾಟಕ ಬಂಜಾರ ಹಕ್ಕು ಸಂರಕ್ಷಣಾ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಾಂತ್ ಅಂಗಡಿ ಮಾತನಾಡಿ, ಸತತ 12 ದಿನಗಳಿಂದ ಜಿಲ್ಲೆಯ 72 ತಾಂಡಾಗಳ ನಾಯಕರು, ಡಾವ್, ಕಾರಭಾರಿ, ಪಂಚರ ಸಮ್ಮುಖದಲ್ಲಿ ಈ ಅಹೋರಾತ್ರಿ ಧರಣಿಗೆ ಕುಳಿತಿದ್ದೇವೆ. ಇತ್ತ ಗಮನ ಹರಿಸದ ಸಚಿವರು, ಸರ್ಕಾರ ದಮನಿತರ ನೋವುಗಳನ್ನು ಹತ್ತಿಕ್ಕುತ್ತಿದೆ. ಈ ಸರ್ಕಾರ ನಮ್ಮ ಸಮಾಜಕ್ಕೆ ನ್ಯಾಯ ದೊರಕಿಸಿಕೊಡದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವ ಮೂಲಕ ಸರ್ಕಾರಕ್ಕೆ ತಕ್ಕ ಪಾಠ ಕಲಿಸುವುದಂತು ಖಚಿತ ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಿ.ಎಲ್ ನಾಯಕ, ಜಿ.ಆರ್ ಪೂಜಾರ್, ಎಚ್.ಡಿ ಲಮಾಣಿ, ಎಸ್.ಎಂ ನಾಯಕ್, ಕೆ.ಎಸ್ ಲಮಾಣಿ, ಸಂಗಪ್ಪ ನಾಯಕ್, ಸೋಮಪ್ಪ ಲಮಾಣಿ, ಶಿವಪುತ್ರಪ್ಪ ನಾಯಕ್, ರಾಮಪ್ಪ ನಾಯಕ್, ಚಂದು ನಾಯಕ್, ಶಿವಪ್ಪ ನಾಯಕ್, ವೀರಪ್ಪ ನಾಯಕ, ಭೀಮಪ್ಪ ಲಮಾಣಿ, ಕೃಷ್ಣಪ್ಪ ಲಮಾಣಿ, ನೂರಪ್ಪ ನಾಯಕ, ಕೇಶಪ್ಪ ನಾಯಕ್, ಬೋಜಪ್ಪ ಲಮಾಣಿ, ಡಿ.ಡಿ ಪೂಜಾರಿ, ಬಾಲು ರಾಠೋಡ್, ರವಿ ಲಮಾಣಿ, ಭೀಮಪ್ಪ ಲಮಾಣಿ, ತುಕಪ್ಪ ನಾಯಕ, ರಾಜು ನಾಯಕ, ಧನ್ನುರಾಮ ತಂಬೂರಿ, ಐ.ಎಸ್ ಪೂಜಾರ್, ಲಕ್ಷ್ಮಣ್ ಜಾದವ್, ಕುಬೇರಪ್ಪ ಪವಾರ್, ಸಂತೋಷ್ ಪವಾರ್, ಸಂತೋಷ್ ಲಮಾಣಿ, ಸೋಮಪ್ಪ ಪೂಜಾರಿ, ಪರಮೇಶ ಲಮಾಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಅವೈಜ್ಞಾನಿಕ ಒಳಮೀಸಲಾತಿ ವರ್ಗೀಕರಣ; 12ನೇ ದಿನದತ್ತ ಬಂಜಾರರ ಅಹೋರಾತ್ರಿ ಧರಣಿ
