ಮೈಸೂರು: ರಾಜ್ಯದ ಕೆಲವು ವಿಶ್ವವಿದ್ಯಾನಿಲಯಗಳನ್ನು ಮುಚ್ಚಲು ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರ ಸರಿಯಿದೆ ಎಂದು ಎಂಎಲ್‌ಸಿ ವಿಶ್ವನಾಥ್ ಅವರು ಮಂಗಳವಾರ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಲ ವಿವಿ ಗಳನ್ನು ಬಂದ್ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರದ ನಿಲುವು ಸರಿಯಾಗಿದೆ. ಈ ಹಿಂದಿನ ಬಿಜೆಪಿ ಸರ್ಕಾರವಿದ್ದಾಗ ವಿಶ್ವವಿದ್ಯಾಲಯದ ಕುಲಪತಿ ಹುದ್ದೆ ಪಡೆಯಲು 5 ಕೋಟಿ ರೂ. ಕೊಡುತ್ತಿದ್ದರು. ಅದು ಈಗಲೂ ಮುಂದುವರೆದಿದೆ. ಈ ವಿಚಾರ ಎಲ್ಲರಿಗೂ ಗೊತ್ತಿದೆ. ವಿದ್ಯೆಯನ್ನು ಮಾರಾಟಕ್ಕಿಟ್ಟ ಭ್ರಷ್ಟ ವ್ಯವಸ್ಥೆ ಈಗಲೂ ಮುಂದುವರಿದಿದೆ. ವಿದ್ಯಾರ್ಥಿಗಳ ಶುಲ್ಕದಲ್ಲಿ ವಿಶ್ವವಿದ್ಯಾಲಯ ನಡೆಯುವಂತಾಗಿದೆ. ರಾಜ್ಯದಲ್ಲೀಗ ಅಕ್ಷರ, ಆರೋಗ್ಯ ಎರಡಕ್ಕೂ ಬೆಲೆ ಇಲ್ಲದಂತಾಗಿದೆ ಎಂದು ಹೇಳಿದರು.
ಉದಯಗಿರಿ ಕಲ್ಲು ತೂರಾಟ ಪ್ರಕರಣ ಕುರಿತು ಮಾತನಾಡಿ, ಇದಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಉತ್ತರಿಸಬೇಕು. ಈ ಸರ್ಕಾರವನ್ನು ರಾಜ್ಯದ ಜನರು ಆಯ್ಕೆ ಮಾಡಿದ್ದಾರೆ. ಎಲ್ಲದಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರಿಸಬೇಕು ಎಂದು ಹರಿಹಾಯ್ದರು.
ರಾಜ್ಯದಲ್ಲಿ ಶಾಂತಿಗೆ ಅವಕಾಶ ಇಲ್ಲದಂತಾಗಿದೆ. ಎಲ್ಲಾ ಕಡೆ, ಪ್ರಕ್ಷುಬ್ಧತೆ, ಗಲಾಟೆ ಗಲಭೆ, ಕೊಲೆ, ಆತ್ಮಹತ್ಯೆಗಳ ನಡೆಯುತ್ತಿವೆ, ಇದಕ್ಕೆಲ್ಲ ಯಾರು ಕಾರಣ? ಜನ ಕಾರಣ ಅಲ್ಲ. ನಾವು ಆಯ್ಕೆ ಮಾಡಿದ ಸರ್ಕಾರ ಕಾರಣ. ಸರ್ಕಾರದ ಮುಖ್ಯಸ್ಥರಾಗಿರುವ ಸಿದ್ದರಾಮಯ್ಯ ಇದಕ್ಕೆಲ್ಲ ಉತ್ತರ ಕೊಡಬೇಕು ಎಂದು ಹೇಳಿದರು.