ಬೆಂಗಳೂರು: ವಿಶ್ವಸಂಸ್ಥೆಯು ಜೂನ್ 11 ಅನ್ನು ‘ಅಂತರರಾಷ್ಟ್ರೀಯ ಆಟದ ದಿನ’ ಎಂದು ಘೋಷಿಸಿದೆ. ಈ ವರ್ಷದಿಂದಲೇ ಇದು ಅನುಷ್ಠಾನಕ್ಕೆ ಬರಲಿದ್ದು ಜಾಗತಿಕ ಮಟ್ಟದಲ್ಲಿ ಉದ್ಘಾಟನೆಯಾಗಲಿದೆ. ವಿಶ್ವಾದ್ಯಂತ ಈ ದಿನವನ್ನು ಮಕ್ಕಳು ಕ್ರೀಡಾ ದಿನವಾಗಿ ಸಂಭ್ರಮಿಸಲಿದ್ದಾರೆ.
ಮಕ್ಕಳ ಆಟವಾಡುವ ಹಕ್ಕನ್ನು ರಕ್ಷಿಸಲು ಅಂತಾರಾಷ್ಟ್ರೀಯ ಆಟದ ದಿನವಾಗಿ ಒಂದು ದಿನವನ್ನು ಗುರುತಿಸುವಂತೆ ವಿಶ್ವಸಂಸ್ಥೆಗೆ ಮಕ್ಕಳೇ ಮನವಿ ಮಾಡಿದ್ದರು. ಮನವಿ ಬೆನ್ನಲ್ಲೇ ವಿಶ್ವಸಂಸ್ಥೆ ಜೂನ್.11ನ್ನು ಅಂತಾರಾಷ್ಟ್ರೀಯ ಆಟದ ದಿನ ಎಂದು ಘೋಷಣೆ ಮಾಡಿದೆ.
ವಿಶ್ವಸಂಸ್ಥೆ ಅಂಗೀಕಾರ ಬೆನ್ನಲ್ಲೇ ಗ್ರಾಮೀಣಾಭಿವೃದ್ಧಿ ಇಲಾಖೆಯ ಆದೇಶ ಹೊರಡಿಸಿದ್ದು, ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಜೂ.11ರಂದು ಅಂತಾರಾಷ್ಟ್ರೀಯ ಆಟದ ದಿನವನ್ನಾಗಿ ಆಚರಿಸುವಂತೆ ಸೂಚನೆ ನೀಡಿದೆ. ಅತ್ಯಂತ ದುರ್ಬಲ ವರ್ಗದವರಿಗೆ, ಅದರಲ್ಲೂ ವಿಶೇಷವಾಗಿ ವಿಕಲಚೇತನ ಮಕ್ಕಳು, ಶಾಲೆಯಿಂದ ಹೊರಗುಳಿದ ಮಕ್ಕಳು ಮತ್ತು ಕೆಲಸ ಮಾಡುವ ಮಕ್ಕಳು ಕಡಿಮೆ ಆಟವಾಡಲು ಅವಕಾಶವಿದ್ದು, ಇವರ ಮೇಲೆ ವಿಶೇಷ ಗಮನ ನೀಡಬೇಕು ಎಂದು ತಿಳಿಸಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಅಂತಾರಾಷ್ಟ್ರೀಯ ಆಟದ ದಿನದ ಅಂಗವಾಗಿ ಗ್ರಾಮ ಪಂಚಾಯಿತಿ ಜಾಗೃತಿ ಕೇಂದ್ರಗಳಲ್ಲಿ ಎಲ್ಲ ಮಕ್ಕಳಿಗಾಗಿ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಲು ನಿರ್ಧರಿಸಿದೆ.