ನವದೆಹಲಿ,ಏಪ್ರಿಲ್ 10: ಮತದಾರರಿಗೆ ಮತ್ತು ಪಾದ್ರಿಗಳಿಗೆ ಲಂಚ ನೀಡುವ ಕುರಿತು ಆರೋಪ ಮಾಡಿದ್ದ ಕಾಂಗ್ರೆಸ್ ಸಂಸದ ಶಶಿ ತರೂರ್ ಗೆ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.
ಇತ್ತೀಚೆಗೆ ಟಿವಿ ವಾಹಿನಿಯೊಂದರಲ್ಲಿ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ತಮ್ಮ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ಲೀಗಲ್ ನೋಟಿಸ್ ಕಳುಹಿಸಿದ್ದಾರೆ.
ಹಾಲಿ ಲೋಕಸಭಾ ಚುನಾವಣೆಯಲ್ಲಿ ಕೇರಳದ ತಿರುವನಂತಪುರಂ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ರಾಜೀವ್ ಚಂದ್ರಶೇಖರ್ ಅವರು, ಕ್ಷೇತ್ರದ ಮತದಾರರಿಗೆ ಮತ್ತು ಪ್ಯಾರಿಷ್ ಪಾದ್ರಿಗಳಂತಹ ಪ್ರಭಾವಿ ವ್ಯಕ್ತಿಗಳಿಗೆ ಲಂಚ ನೀಡಿದ್ದಾರೆ ಎಂದು ಅದೇ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಶಿತರೂರ್ ಆರೋಪಿಸಿದ್ದರು. ಟಿವಿ ಸಂದರ್ಶನದ ವೇಳೆ ಶಶಿತರೂರ್ ಈ ಗಂಭೀರ ಆರೋಪ ಮಾಡಿದ್ದರು. ಇದೀಗ ಈ ಆರೋಪಗಳನ್ನು ಅಲ್ಲಗಳೆದಿರುವ ಬಿಜೆಪಿ ಅಭ್ಯರ್ಥಿ ರಾಜೀವ್ ಚಂದ್ರಶೇಖರ್ ಕಾನೂನಾತ್ಮಕ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.
ತಮ್ಮ ಪ್ರತಿಷ್ಠೆ ಮತ್ತು ವರ್ಚಸ್ಸಿಗೆ ಧಕ್ಕೆ ತರುವ ಉದ್ದೇಶದಿಂದ ಶಶಿತರೂರ್ ಅವರು ಈ ಆರೋಪಗಳನ್ನು ಮಾಡುತ್ತಿದ್ದಾರೆ. ಅವರ ಹೇಳಿಕೆಗಳು ತಿರುವನಂತಪುರದ ಇಡೀ ಕ್ರಿಶ್ಚಿಯನ್ ಸಮುದಾಯವನ್ನು ಮತ್ತು ಅದರ ಮುಖಂಡರನ್ನು ಅಗೌರವಗೊಳಿಸಿವೆ. ಮತಕ್ಕಾಗಿ ನಗದು ಚಟುವಟಿಕೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೇ ತೊಡಗಿದ್ದಾರೆ ಎಂದು ರಾಜೀಲ್ ಚಂದ್ರಶೇಖರ್ ಆರೋಪಿಸಿದ್ದಾರೆ.
ಅಲ್ಲದೆ ಕಾಂಗ್ರೆಸ್ ಸಂಸದರ ಹೇಳಿಕೆಗಳು ಮಾದರಿ ನೀತಿ ಸಂಹಿತೆ (ಎಂಸಿಸಿ) ಉಲ್ಲಂಘನೆಯಾಗಿದ್ದು, ಈ ಹೇಳಿಕೆಗಳು ಬಿಜೆಪಿ ನಾಯಕರ ಚುನಾವಣಾ ಪ್ರಚಾರವನ್ನು ಘಾಸಿಗೊಳಿಸುವ ಮತ್ತು ಚುನಾವಣೆಯಲ್ಲಿ ಶಶಿ ತರೂರ್‌ಗೆ ಲಾಭ ಮಾಡಿಕೊಡುವ ಗುರಿಯನ್ನು ಹೊಂದಿವೆ. ಹೀಗಾಗಿ ತಾವು ಏಪ್ರಿಲ್ 6 ರಂದು ನನ್ನ ವಿರುದ್ಧ ಮಾಡಲಾದ ಎಲ್ಲಾ ಆರೋಪಗಳನ್ನು “ತಕ್ಷಣ ಹಿಂತೆಗೆದುಕೊಳ್ಳುವಂತೆ” ಮತ್ತು ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ತಮಗೆಗೆ ಬೇಷರತ್ ಸಾರ್ವಜನಿಕ ಕ್ಷಮೆಯಾಚಿಸಬೇಕು ಎಂದು ನೋಟಿಸ್‌ನಲ್ಲಿ ಕೇಳಲಾಗಿದೆ.
ಒಂದು ವೇಳೆ ಕ್ಷಮೆ ಕೇಳದಿದ್ದರೆ ಭವಿಷ್ಯದಲ್ಲಿ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುತ್ತದೆ. ನೊಟೀಸ್ ಸ್ವೀಕರಿಸಿದ 24 ಗಂಟೆಗಳ ಒಳಗೆ ಷರತ್ತುಗಳನ್ನು ಅನುಸರಿಸಲು ವಿಫಲವಾದರೆ ನ್ಯಾಯಾಲಯದಲ್ಲಿ ಸೂಕ್ತ ಕ್ರಿಮಿನಲ್ ಮತ್ತು ಸಿವಿಲ್ ವಿಚಾರಣೆಯನ್ನು ಪ್ರಾರಂಭಿಸಲು ಕಾರಣವಾಗುತ್ತದೆ ಎಂದು ಬಿಜೆಪಿ ಅಭ್ಯರ್ಥಿ ರಾಜೀವ್ ಚಂದ್ರಶೇಖರ್ ಎಚ್ಚರಿಸಿದ್ದಾರೆ.