ನವದೆಹಲಿ, 08:ಕೇಂದ್ರ ರೈಲ್ವೆ ಮತ್ತು ಜಲ ಶಕ್ತಿ ರಾಜ್ಯ ಖಾತೆಯ ಸಚಿವರಾದ ವಿ ಸೋಮಣ್ಣ ಅವರು ನವದೆಹಲಿಯಲ್ಲಿ ಇಂದು ಸನ್ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಈ ಭೇಟಿಯ ಸಂದರ್ಭದಲ್ಲಿ ರಾಜ್ಯದ ಸರ್ವಾಂಗೀಣ ಅಭಿವೃದ್ದಿಯ ಬಗ್ಗೆ ಚರ್ಚೆ ಮಾಡಿದ್ದು, ಕಳೆದ ಮೂರು ತಿಂಗಳಲ್ಲಿ ರಾಜ್ಯದಲ್ಲಿ ರೈಲ್ವೆ ಅಭಿವೃದ್ದಿಯ ಕುರಿತಾಗಿ ತೆಗೆದುಕೊಂಡ ಕ್ರಮಗಳ ಬಗ್ಗೆ ಕೇಂದ್ರ ಸಚಿವರಾದ ವಿ ಸೋಮಣ್ಣನವರು ಮಾನ್ಯ ಪ್ರಧಾನಮಂತ್ರಿಗಳಿಗೆ ವಿವರಿಸಿದ್ದಾರೆ.
ಬೆಂಗಳೂರು ಸಬ್ ಅರ್ಬನ್ ರೈಲ್ವೆ, ವರ್ತುಲ ರೈಲ್ವೆ ಇತ್ಯಾದಿಗಳ ಬಗ್ಗೆ 2 ಸುತ್ತಿನ ಸಭೆ ನಡೆಸಿರುವ ಬಗ್ಗೆ ಕೇಂದ್ರ ಸಚಿವರಾದ ವಿ. ಸೋಮಣ್ಣನವರು ಸನ್ಮಾನ್ಯ ಪ್ರಧಾನಮಂತ್ರಿಗಳಿಗೆ ವಿವರಿಸಿದ್ದಾರೆ. ಕಳೆದ ಹತ್ತಾರು ವರ್ಷಗಳಿಂದ ನೆನೆಗುದಿಯಲ್ಲಿದ್ದ ತುಮಕೂರು ರಾಯದುರ್ಗ ರೈಲ್ವೆ ಮಾರ್ಗ ಭೂಸ್ವಾಧಿನ ಪ್ರಕ್ರಿಯೆಯನ್ನು ಕೇವಲ 3 ತಿಂಗಳ ಅವಧಿಯಲ್ಲಿ 90% ಕ್ಕಿಂತಲೂ ಮಿಗಿಲಾಗಿ ಮುಗಿಸಿರುವ ಬಗ್ಗೆ ಪ್ರಧಾನಮಂತ್ರಿಗಳಿಗೆ ವಿವರಿಸಿದ್ದಾರೆ. ರೈಲ್ವೆ ಅಧಿಕಾರಿ ಮತ್ತು ಜಿಲ್ಲಾಡಳಿತದ ಉತ್ತಮ ಕಾರ್ಯವೈಖರಿಯ ಬಗ್ಗೆಯೂ ಮಾನ್ಯ ಪ್ರಧಾನಮಂತ್ರಿ ಅವರ ಗಮನ ಸೆಳೆದಿದ್ದು, ಪ್ರಧಾನಮಂತ್ರಿಗಳು ಅತ್ಯಂತ ಹರ್ಷ ವ್ಯಕ್ತಪಡಿಸಿದ ಬಗ್ಗೆ ಕೇಂದ್ರ ಸಚಿವರಾದ ಸೋಮಣ್ಣ ರವರು ತಿಳಿಸಿದ್ದಾರೆ.
ಇದಲ್ಲದೆ ಕಳೆದ 3 ತಿಂಗಳಲಲ್ಲಿ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಪ್ರವಾಸ ಮಾಡಿ ರೈಲ್ವೆ ಇಲಾಖೆಗೆ ಸಂಬಂಧಪಟ್ಟ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಸಚಿವ ಸೋಮಣ್ಣನವರ ಕಾರ್ಯವೈಖರಿಯನ್ನು ಸನ್ಮಾನ್ಯ ಪ್ರಧಾನಮಂತ್ರಿಗಳು ಶ್ಲಾಘಿಸಿದ್ದಾರೆ ಎನ್ನುವ ಮಾಹಿತಿಯನ್ನು ಕೇಂದ್ರ ಸಚಿವ ಸೋಮಣ್ಣನವರು ಅತ್ಯಂತ ಸಂತಸದಿಂದ ಹಂಚಿಕೊಂಡಿದ್ದಾರೆ. ತುಮಕೂರು ಜಿಲ್ಲೆಯ ಅಭಿವೃದ್ಧಿಯ ಕುರಿತಾಗಿ ಕೆಲವು ವಿಶೇಷ ಪ್ರಸ್ತಾವನೆಗಳನ್ನು ಮಾನ್ಯ ಪ್ರಧಾನಮಂತ್ರಿಗಳಿಗೆ ಮಂಡಿಸಿದ್ದು, ತಮ್ಮ ಲೋಕಸಭಾ ಕ್ಷೇತ್ರದ ಸರ್ವೋತೋಮುಖ ಅಭಿವೃದ್ದಿಗೆ ವಿಶೇಷ ಅನುದಾನ ನೀಡುವಂತೆ ಕೇಂದ್ರ ಸಚಿವ ವಿ. ಸೋಮಣ್ಣ ಅವರು ಮಾನ್ಯ ಪ್ರಧಾನಮಂತ್ರಿ ಅವರಿಗೆ ಮನವಿ ಮಾಡಿದ್ದಾರೆ.
ತುಮಕೂರು ಜಿಲ್ಲೆಯ ರೈಲ್ವೆ ನಿಲ್ದಾಣದ ಅಭಿವೃದ್ಧಿಗೆ ರೂ.87 ಕೋಟಿ ಅನುದಾನ ನೀಡಲಾಗಿದ್ದು, ಈ ರೈಲ್ವೆ ನಿಲ್ದಾಣಕ್ಕೆ ಡಾ ಶ್ರೀ ಶ್ರೀ ಶ್ರೀ ಶಿವಕುಮಾರ್ ಮಹಾ ಸ್ವಾಮಿಜಿಯವರ ನಾಮಕರಣ ಮಾಡುವಂತೆ ಮನವಿ ಮಾಡಿದ್ದಾರೆ. ತುಮಕೂರು – ರಾಯದುರ್ಗ ಮತ್ತು ತುಮಕೂರು-ಚಿತ್ರದುರ್ಗ-ದಾವಣಗೆರೆ ರೈಲ್ವೆ ಮಾರ್ಗವನ್ನು ಜೂನ್ 2027ರಲ್ಲಿ ಲೋಕಾರ್ಪಣೆ ಮಾಡಲು ತುಮಕೂರಿಗೆ ಆಗಮಿಸುವಂತೆ ಮಾನ್ಯ ಪ್ರಧಾನಮಂತ್ರಿಗಳಲ್ಲಿ ಕೇಂದ್ರ ಸಚಿವರಾದ ಸೋಮಣ್ಣ ಮನವಿ ಮಾಡಿದ್ದಾರೆ.
ರೈಲ್ವೆ ಇಲಾಖೆಯಲ್ಲಿನ ಎಲ್ಲಾ ಅಭಿವೃದ್ಧಿ ಕಾರ್ಯಗಳಿಗೆ ಅತ್ಯಂತ ಸಹಕಾರ ನೀಡಿದ ಕೇಂದ್ರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ರವರ ಸಹಕಾರ ಮನೋಭಾವನೆಯನ್ನು ಅತ್ಯಂತ ಗೌರವಪೂರ್ವಕವಾಗಿ ಕೇಂದ್ರ ಸಚಿವ ಸೋಮಣ್ಣನವರು ಪ್ರಧಾನಮಂತ್ರಿಯವರ ಭೇಟಿಯ ಸಂದರ್ಭದಲ್ಲಿ ವ್ಯಕ್ತಪಡಿಸಿದ್ದಾರೆ.