ಬೆಂಗಳೂರಿನ BHEL ವಿದ್ಯುನ್ಮಾನ ಘಟಕಕ್ಕೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಭೇಟಿ

Ravi Talawar
ಬೆಂಗಳೂರಿನ BHEL ವಿದ್ಯುನ್ಮಾನ ಘಟಕಕ್ಕೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಭೇಟಿ
WhatsApp Group Join Now
Telegram Group Join Now

*ಪ್ರಧಾನಿ ಮೋದಿ ಅವರ ಮಾರ್ಗದರ್ಶನದಲ್ಲಿ ಸಾರ್ವಜನಿಕ ಉದ್ಯಮಗಳಿಗೆ ಕಾಯಕಲ್ಪದ ಭರವಸೆ

*ಆತ್ಮನಿರ್ಭರ್ ಭಾರತ, ಮೆಕ್ ಇನ್ ಇಂಡಿಯಾ ಪರಿಕಲ್ಪನೆಗಳು ಕೈಗಾರಿಕೆಗಳಿಗೆ ಸಂಜೀವಿನಿ ಎಂದು ಪ್ರತಿಪಾದಿಸಿದ ಕೇಂದ್ರ ಸಚಿವರು

ಬೆಂಗಳೂರು: ಪ್ರಧಾನಿಗಳ ಆತ್ಮನಿರ್ಭರ್ ಭಾರತ ಹಾಗೂ ಮೆಕ್ ಇನ್ ಇಂಡಿಯಾ ಪರಿಕಲ್ಪನೆಗಳು ಕೈಗಾರಿಕಾ ಕ್ಷೇತ್ರದ ಮೇಲೆ ಸಂಜೀವಿನಿಯಂತೆ ಸಕಾರಾತ್ಮಕ ಪರಿಣಾಮ ಬೀರುತ್ತಿವೆ ಎಂದು ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಪ್ರತಿಪಾದಿಸಿದರು.

ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಭಾರತ್ ಹೆವಿ ಎಲೆಕ್ಟ್ರಿಕಲ್ ಲಿಮಿಟೆಡ್ (BHEL)ನ ವಿದ್ಯುನ್ಮಾನ ಘಟಕಕ್ಕೆ ಭೇಟಿ ನೀಡಿದ ವೇಳೆ ಅಧಿಕಾರಿಗಳು ಮತ್ತು ಕಾರ್ಮಿಕರ ಜತೆ ಸಂವಾದ ನಡೆಸುತ್ತಾ ಸಚಿವರು ಮಾತನಾಡಿದರು.

ದೇಶದ ಒಟ್ಟಾರೆ ಅಭಿವೃದ್ಧಿಗೆ ಪ್ರಧಾನಿಗಳು ದೊಡ್ಡ ದೊಡ್ಡ ಹೆಜ್ಜೆಗಳನ್ನು ಇಡುತ್ತಿದ್ದಾರೆ. ಅವರನ್ನು ನಾವು ನಿಕಟವಾಗಿ ಹಿಂಬಾಲಿಸುತ್ತಿದ್ದೇವೆ. ಸಾರ್ವಜನಿಕ ಸ್ವಾಮ್ಯದ ಉದ್ಯಮಗಳಿಗೆ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಎಲ್ಲಾ ಸಾಧ್ಯತೆಗಳನ್ನು ಮುಂದಿಟ್ಟುಕೊಂಡು ಪರಿಶೀಲನೆ ನಡೆಸಲಾಗುತ್ತಿದೆ. ನಿರಂತರವಾಗಿ ಚರ್ಚೆಗಳನ್ನು ನಡೆಸಲಾಗುತ್ತಿದೆ ಎಂದು ಸಚಿವರು ಹೇಳಿದರು.

BHEL ಗೆ ಮತ್ತಷ್ಟು ಶಕ್ತಿ: ಪ್ರಧಾನಿಗಳ ಸ್ಪಷ್ಟ ಮತ್ತು ನಿಖರ ಗುರಿಗಳನ್ನು ಇಟ್ಟುಕೊಂಡಿದ್ದಾರೆ. ಭಾರತವನ್ನು ಮೂರನೇ ಬೃಹತ್ ಆರ್ಥಿಕ ಶಕ್ತಿಯನ್ನಾಗಿ ರೂಪಿಸುವುದು ಹಾಗೂ ಆರ್ಥಿಕ ವ್ಯವಸ್ಥೆಗೆ ಶಕ್ತಿ ತುಂಬಲು ಕೈಗಾರಿಕಾ ಉತ್ಪನ್ನವನ್ನು ಹೆಚ್ಚಳ ಮಾಡುವುದು ಅವರ ಉದ್ದೇಶವಾಗಿದೆ. ಅದಕ್ಕಾಗಿ ಅವರ ಕನಸಿನ ಮೆಕ್ ಇನ್ ಇಂಡಿಯಾ ಹಾಗೂ ಆತ್ಮನಿರ್ಭರ್ ಭಾರತ್ ಪರಿಕಲ್ಪನೆಗಳು ಹೆಚ್ಚು ಪರಿಣಾಮಕಾರಿ ಆಗಿವೆ. ಇದೇ ಪರಿಕಲ್ಪನೆ ಅಡಿಯಲ್ಲಿ ಭಾರತ್ ಹೆವಿ ಎಲೆಕ್ಟ್ರಿಕಲ್ ಕಾರ್ಖಾನೆಯನ್ನು ಮತ್ತಷ್ಟು ಸಶಕ್ತಗೊಳಿಸಲಾಗುವುದು ಎಂದು ಕುಮಾರಸ್ವಾಮಿ ಅವರು ಹೇಳಿದರು.

ದೇಶದ ಸಾರ್ವಜನಿಕ ಸ್ವಾಮ್ಯದ ಕಂಪನಿಗಳ ಪೈಕಿ BHEL ಉತ್ತಮವಾಗಿ ನಡೆಯುತ್ತಿದೆ. ಮೈಸೂರು ಅರಸರು, ಸರ್ ಎಂ ವಿಶ್ವೇಶ್ವರಯ್ಯ ಅವರ ದೂರದೃಷ್ಟಿ ಹಿನ್ನೆಲೆಯಲ್ಲಿ ಇದು ಸ್ಥಾಪನೆಯಾಯಿತು. ಕೈಗಾರಿಕೆ ಕ್ಷೇತ್ರದಲ್ಲಿ ದೇಶಕ್ಕೆ ದೊಡ್ಡ ಮಟ್ಟದ ಕೊಡುಗೆ ಕೊಟ್ಟಿದೆ. ದೇಶದಲ್ಲಿ ಸಾರ್ವಜನಿಕ ಕೈಗಾರಿಕೆಗಳು ಅನೇಕ ಸವಾಲುಗಳನ್ನು ಎದುರಿಸುತ್ತಿವೆ. ಇಂಥ ಸವಾಲಿನ ನಡುವೆಯೂ BHEL ಲಾಭದಾಯಕವಾಗಿ ಮುನ್ನಡೆಯುತ್ತಿದೆ ಎಂದು ಸಚಿವರು ಸಂತಸ ವ್ಯಕ್ತಪಡಿಸಿದರು.

ವಿದ್ಯುತ್ ಕ್ಷೇತ್ರದಲ್ಲಿ BHEL ಕೊಡುಗೆ ಅಸಾಧಾರಣವಾಗಿದೆ, ಥರ್ಮಲ್ ವಿದ್ಯುತ್ ಕ್ಷೇತ್ರದಲ್ಲಿ ಶೇ.40ಕ್ಕೂ ಹೆಚ್ಚು ಮಾರುಕಟ್ಟೆ ಪಾಲನ್ನು ಕಂಪನಿ ಹೊಂದಿದೆ. ಭಾರತೀಯ ಸೇನೆ, ಬಾಹ್ಯಾಕಾಶ ಕ್ಷೇತ್ರದಲ್ಲಿ ಈ ಕಂಪನಿ ಕೊಡುಗೆ ಅನನ್ಯವಾಗಿದೆ ಎಂದರು ಸಚಿವರು.

ಬೇಡಿಕೆ ಹೆಚ್ಚು, ಲಾಭ ಕಡಿಮೆ ಯಾಕೆ?:BHEL ಕಂಪನಿಗೆ ದೊಡ್ಡ ಪ್ರಮಾಣದ ಬೇಡಿಕೆಗಳಿಗೆ ಬರುತ್ತಿವೆ, ಆದರೆ ಲಾಭ ಅಷ್ಟು ತೃಪ್ತಿದಾಯಕವಾಗಿ ಇಲ್ಲ ಎಂದ ಸಚಿವರು; ನೀವು ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ. ಯಾವುದೇ ಕಾರಣಕ್ಕೂ ನಷ್ಟಕ್ಕೆ ಸಿಲುಕದ ಹಾಗೆ ನೋಡಿಕೊಳ್ಳುವ ಹೊಣೆ ಅಧಿಕಾರಿಗಳು, ಕಾರ್ಮಿಕರ ಮೇಲೆಯೇ ಇದೆ ಎಂದು ಒತ್ತಿ ಹೇಳಿದರು.

ಪ್ರಧಾನಿಮಂತ್ರಿಗಳು ಮೆಕ್ ಇಂಡಿಯಾ, ಆತ್ಮ ನಿರ್ಭರ್ ಭಾರತ್ ಪರಿಕಲ್ಪನೆಯ ಅಡಿಯಲ್ಲಿ BHEL ಅತ್ಯುತ್ತಮವಾಗಿ ಕೆಲಸ ಮಾಡುತ್ತಿದೆ. ವೇಗವಾಗಿ ಬೆಳೆಯುತ್ತಿರುವ ತಾಂತ್ರಿಕ ಆವಿಷ್ಕಾರಗಳ ನಡುವೆ ಕಂಪನಿಯು ವೇಗವಾಗಿ ಮುನ್ನಡೆಯುತ್ತಿದೆ. ಇಂಥ ಸಂದರ್ಭದಲ್ಲಿ ಹೊಸ ಆವಿಷ್ಕಾರ, ತಂತ್ರಜ್ಞಾನ ಅಳವಡಿಕೆಯಲ್ಲಿ ಮೈಮರೆಯುವುದು ಬೇಡ ಎಂದು ಎಚ್ಚರಿಕೆ ನೀಡಿದರು.

ನವದೆಹಲಿಯ ಸಚಿವಾಲಯದ ಕಚೇರಿಯಲ್ಲಿ ಈಗಾಗಲೇ ಕಂಪನಿಯ ಆಗುಹೋಗುಗಳ ಬಗ್ಗೆ ಹಲವಾರು ಪರಿಶೀಲನಾ ಸಭೆಗಳನ್ನು ನಡೆಸಲಾಗಿದೆ. ಈ ಕಂಪನಿ ಉತ್ತಮವಾಗಿ ನಡೆಯುತ್ತಿದೆ. ಒಳ್ಳೆಯ ಆಡಳಿತ, ಉತ್ತಮ ಕಾರ್ಮಿಕ ಶಕ್ತಿ, ತಾಂತ್ರಿಕ ಕುಶಲತೆಯಿಂದ ಉತ್ತಮ ಸ್ಥಿತಿಯಲ್ಲಿ ಇದೆ. ಸಾರ್ವಜನಿಕ ಸ್ವಾಮ್ಯದ ಕಂಪನಿಗಳ ಪೈಕಿ ಇದು ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

 

ಬೆಂಗಳೂರು ನಗರ ಕೈಗಾರಿಕೆ ಕ್ಷೇತ್ರದಲ್ಲಿ ದೇಶಕ್ಕೆ ದೊಡ್ಡ ಮಟ್ಟದ ಕೊಡುಗೆ ಕೊಟ್ಟಿದೆ. ದೇಶದ ಅತ್ಯುತ್ತಮ ಕೈಗಾರಿಕೆಗಳು ಬೆಂಗಳೂರಿನಲ್ಲಿಯೇ ಇದ್ದವು. ಹೆಚ್ಎಂಟಿ, ಬೆಮೆಲ್, ಐಟಿಐ, ಹೆಚ್ ಎ ಎಲ್, ಬಿಇಎಲ್, ಬಿಇಎಂಎಲ್ ಸೇರಿದಂತೆ ಅನೇಕ ಕೈಗಾರಿಕೆಗಳಿಗೆ ಬೆಂಗಳೂರು ಹೆಸರುವಾಸಿಯಾಗಿದೆ. ಅದರ ಇವುಗಳಲ್ಲಿ ಕೆಲವು ನಷ್ಟದ ಹಾಡಿಗೆ ಸಿಕ್ಕಿವೆ. ಅಂತಹ ಪರಿಸ್ಥಿತಿ BHELಗೆ ಬರುವುದು ಬೇಡ ಎಂದು ಸಚಿವರು ಆಶಿಸಿದರು.

ಈ ಸಂದರ್ಭದಲ್ಲಿ ಸಚಿವರು ಘಟಕದ ಎಲ್ಲಾ ವಿಭಾಗಗಳಿಗೆ ಭೇಟಿ ನೀಡಿ ಖುದ್ದು ಪರಿಶೀಲಿಸಿದರು. ಕಾರ್ಖಾನೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಉನ್ನತ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಕಾರ್ಮಿಕರ ಜತೆ ಸಂವಾದ ನಡೆಸಿ ಅವರ ಬೇಡಿಕೆಗಳನ್ನು ಆಲಿಸಿದರು.

ಕಾರ್ಖಾನೆಯ ಕಾರ್ಯ ನಿರ್ವಾಹಕ ನಿರ್ದೇಶಕ ಶ್ಯಾಂ ಬಾಬು ಸೇರಿದಂತೆ ಕಂಪನಿಯ ಹಿರಿಯ ಅಧಿಕಾರಿಗಳು ಹಾಜರಿದ್ದರು. ಈ ಸಂದರ್ಭದಲ್ಲಿ ವಿವಿಧ ವಿಭಾಗಗಳ ಕಾರ್ಮಿಕರು ಸಚಿವರನ್ನು ಸತ್ಕರಿಸಿದರು.

 

WhatsApp Group Join Now
Telegram Group Join Now
Share This Article