ಬೆಂಗಳೂರು, ಮಾರ್ಚ್ 29: ನಗರದಲ್ಲಿ ನಡೆಯುತ್ತಿರುವ ಕೆಲ ಕಾಮಗಾರಿಗಳಿಂದ ಸಿಲಿಕಾನ್ ಸಿಟಿಯಲ್ಲಿ ಹೆಜ್ಜೆ ಹೆಜ್ಜೆಗೂ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಗಲ್ಲಿ ಗಲ್ಲಿಗಳಲ್ಲೂ ವಾಹನಗಳ ದಟ್ಟಣೆ ಇರುತ್ತದೆ. ಕಾಮಗಾರಿಗಳಿಂದ ವಾಹನ ಸವಾರರು ನಿತ್ಯ ಟ್ರಾಫಿಕ್ ಸೇರಿದಂತೆ ಧೂಳಿನ ಕಿರಿಕಿರಿ ಅನುಭವಿಸುವಂತಾಗಿದೆ. ಸದ್ಯ ಯಲಹಂಕ, ಮಾರತಹಳ್ಳಿ, ದೊಡ್ಡನೇಕುಂಡಿ ಸೇರಿ ಕೆಲ ಪ್ರದೇಶಗಳಲ್ಲಿ ವಿವಿಧ ಕಾಮಗಾರಿಗಳು ನಡೆಯುತ್ತಿವೆ. ಜೊತೆಗೆ ಯುಗಾದಿ ಮತ್ತು ರಂಜಾನ್ ಹಬ್ಬ ಹಿನ್ನೆಲೆ ಸಂಚಾರ ದಟ್ಟಣೆ ಉಂಟಾಗಲಿದೆ. ಹಾಗಾಗಿ ವಾಹನ ಸವಾರರು ಸಹಕರಿಸುವಂತೆ ಬೆಂಗಳೂರು ಟ್ರಾಫಿಕ್ ಪೊಲೀಸ್ ಮನವಿ ಮಾಡಿದ್ದಾರೆ.
ಯುಗಾದಿ, ರಂಜಾನ್ ಹಬ್ಬದ ಹಿನ್ನೆಲೆ ಸಿಲಿಕಾನ್ ಸಿಟಿಯಲ್ಲಿ ಸಂಚಾರ ದಟ್ಟಣೆ: ಬದಲಿ ರಸ್ತೆ ಬಳಸುವಂತೆ ಸೂಚನೆ

ನಗರದಲ್ಲಿ ಮೆಟ್ರೋ, ಪೈಪ್ಲೈನ್ ಹಾನಿ, ಬಿಡಬ್ಲ್ಯೂಎಸ್ಎಸ್ಟಿ ಮತ್ತು ಬಿಬಿಎಂಪಿ ಕಾಮಗಾರಿಗಳು ನಡೆಯುತ್ತಿರುವುದರಿಂದ ಕೆಲ ಪ್ರದೇಶಗಳಲ್ಲಿ ಸಂಚಾರದಲ್ಲಿ ಅಸ್ತವ್ಯಸ್ತವಾಗಿದೆ. ಹೀಗಾಗಿ ಬೆಂಗಳೂರು ಟ್ರಾಫಿಕ್ ಪೊಲೀಸ್ ಕೆಲ ಸಂಚಾರಿ ಸಲಹೆಗಳನ್ನು ನೀಡಿದ್ದಾರೆ.
ಯುಗಾದಿ ಮತ್ತು ರಂಜಾನ್ ಹಬ್ಬದ ಪ್ರಯುಕ್ತ ಸರ್ಕಾರಿ ರಜೆ ಇದ್ದು, ಕೆಎಸ್ಆರ್ಟಿಸಿ ಸಂಸ್ಥೆ ವತಿಯಿಂದ ಹೆಚ್ಚುವರಿ ಬಸ್ ಬಿಟ್ಟಿರುವ ಹಿನ್ನೆಲೆ ಪ್ರಯಾಣಿಕರು ಈ ದಿನ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಊರುಗಳಿಗೆ ತೆಳುತ್ತಾರೆ. ಹಾಗಾಗಿ ಮೆಜೆಸ್ಟಿಕ್ ಸುತ್ತಮುತ್ತ ಸಂಚಾರ ದಟ್ಟಣೆಯಾಗುವ ಕಾರಣ ಸಾರ್ವಜನಿಕರು ಬದಲಿ ರಸ್ತೆ ಮೂಲಕ ತೆರಳುವಂತೆ ಸೂಚಿಸಲಾಗಿದೆ.