ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಿ ಯು.ನಿಸಾರ್ ಅಹಮದ್ ಅಧಿಕಾರಿಗಳಿಗೆ ಸೂಚನೆ

MK HasiruKranti
ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಿ ಯು.ನಿಸಾರ್ ಅಹಮದ್ ಅಧಿಕಾರಿಗಳಿಗೆ ಸೂಚನೆ
WhatsApp Group Join Now
Telegram Group Join Now
ವಿಜಯಪುರ,ಏ.೦೭: ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಂಡು,ಜೀವನದಲ್ಲಿ ಸಾಧನೆ ಮಾಡುವಂತೆ ಅಧಿಕಾರಿಗಳು  ಮಕ್ಕಳಿಗೆ ಪ್ರೇರೆಪಿಸುವ ಮೂಲಕ ಪೋಷಕರಿಗೆ  ಅರಿವು ಮೂಡಿಸಬೇಕು ಎಂದು ಕರ್ನಾಟಕ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾದ ಯು.ನಿಸಾರ್ ಅಹಮದ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಪ್ರಧಾನ ಮಂತ್ರಿಗಳ ಹೊಸ ೧೫ ಅಂಶಗಳ ಕಾರ್ಯಕ್ರಮ ಅನುಷ್ಠಾನಗೊಳಿಸುವ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ಕುರಿತು ಪೋಷಕರಿಗೆ ತಿಳಿ ಹೇಳುವ ಮೂಲಕ ಶಿಕ್ಷಣದ ಮಹತ್ವವನ್ನು ತಿಳಿಸಬೇಕು. ತನ್ಮೂಲಕ ಮಕ್ಕಳು ಉನ್ನತ ವಿದ್ಯಾಭ್ಯಾಸ ಹೊಂದಿ ರಾಷ್ಟ್ರದ ಅಭಿವೃದ್ಧಿಯಲ್ಲಿ ಕೊಡುಗೆ ನೀಡುವಂತಾಗಬೇಕು ಎಂದರು.
ಈ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಗಳು ಶ್ರಮಿಸಬೇಕು. ಎಲ್ಲ ಮಕ್ಕಳು ಶಾಲೆಗೆ ಸೇರಬೇಕು. ಮಾಹಿತಿಯನ್ನು  ಒದಗಿಸುವಂತೆ ಸೂಚಿಸಿದರು. ಶಾಲೆ ಬಿಟ್ಟ ಮಕ್ಕಳ ಮಾಹಿತಿಯನ್ನು ಸಂಗ್ರಹಿಸಿ ಮತ್ತೆ ಮರಳಿ ಶಾಲೆಗೆ ಕರೆತರಬೇಕು. ಶಿಕ್ಷಣದ ಮಹತ್ವದ ಕುರಿತು ಅಧಿಕಾರಿಗಳು ಮನವರಿಕೆ ಮಾಡಿ ಕೊಡಬೇಕು. ಸರ್ಕಾರ ಶಿಕ್ಷಣಕ್ಕಾಗಿ ಹಲವಾರು ಯೋಜನೆಗಳನ್ನು  ಜಾರಿಗೆ ತಂದಿದೆ. ಈ ಸೌಲಭ್ಯಗಳನ್ನು ಒದಗಿಸಿ ಶಿಕ್ಷಣದಿಂದ ಯಾರು ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದರು.
ನಗರ ಹಾಗೂ ಗ್ರಾಮೀಣ ಭಾಗದ ಅಂಗನವಾಡಿಯಲ್ಲಿ ಕಲಿಯುವ ಮಕ್ಕಳ ಮಾಹಿತಿ ದತ್ತಾಂಶ ಒದಗಿಸಬೇಕು. ಶಿಕ್ಷಣದ ಮಹತ್ವ, ಶಾಲೆಬಿಟ್ಟ ಮಕ್ಕಳ ಕುರಿತಾಗಿ ಮಾಹಿತಿ ಮತ್ತು ಅನೇಕ ಅಭಿಯಾನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಈ ಬಗ್ಗೆ ಜಾಗೃತಿ ಮೂಡಿಸಬೇಕು ಅಂತ ಹೇಳಿದರು.
ಉದ್ಯೋಗ ಮಾಹಿತಿ ವಿದ್ಯಾಭ್ಯಾಸಕ್ಕೆ ತಕ್ಕಂತೆ ತರಬೇತಿ, ವಿವಿಧ ಕೋರ್ಸ್ ಗಳಿಗೆ ಇರುವ ಮಾಹಿತಿಯನ್ನು ಆಯಾ ಕಾಲೇಜುಗಳಿಗೆ ಭೇಟಿ ನೀಡಿ ಮಾಹಿತಿಯನ್ನು ಅಧಿಕಾರಿಗಳು ಒದಗಿಸಬೇಕು.  ಕೌಶಲ್ಯ ಅಭಿವೃದ್ಧಿ ಇಲಾಖೆಯಿಂದ ವಿವಿಧ ಕೌಶಲ್ಯ ಹಾಗೂ ಮಾಹಿತಿ ಒದಗಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು.  ಕೊಳಚೆ ನಿರ್ಮೂಲನಾ ಮಂಡಳಿಯಿಂದ ಅರ್ಹ ಅಲ್ಪಸಂಖ್ಯಾತ ಸಮುದಾಯದ ಫಲಾನುಭವಿಗಳಿಗೆ ಮನೆ ಒದಗಿಸಲು, ಕಾಮಗಾರಿಗೆ ವೇಗ ನೀಡಿ, ಸರ್ಕಾರಿ ಯೋಜನೆಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿ ಈ ಬಗ್ಗೆ ವರದಿಯನ್ನು ಸಲ್ಲಿಸುವಂತೆ ಅವರು ಸೂಚನೆ ನೀಡಿದರು.
ಅಲ್ಪಸಂಖ್ಯಾತರ ಸಮುದಾಯದವರ ಅಭಿವೃದ್ಧಿಗಾಗಿ ಸರ್ಕಾರ ಹಲವಾರು ಯೋಜನೆ ಜಾರಿಗೊಳಿಸಿ ಅನುಷ್ಠಾನಗೊಳಿಸುತ್ತಿದೆ.  ಸಾಲ ಸೌಲಭ್ಯಕ್ಕಾಗಿ ಬ್ಯಾಂಕ್ ಗಳಿಗೆ ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳಿಗೆ ವೃಥಾ ವಿಳಂಬ ಮಾಡದೇ ಅವರ ಅರ್ಜಿಗಳನ್ನು ತಕ್ಷಣ ವಿಲೇವಾರಿ ಮಾಡಬೇಕು ಎಂದರು..
ಅರ್ಜಿದಾರರಿಗೆ ಸಾಲ ಸೌಲಭ್ಯ ಒದಗಿಸಿಕೊಟ್ಟು ಆರ್ಥಿಕ ಸದೃಢತೆ ಹೊಂದಲು ಸ್ಪಂದಿಸಬೇಕು. ಈ ಕುರಿತು  ಜಾಗೃತಿ ಮೂಡಿಸಬೇಕು ಎಂದೂ ಸಲಹೆ ಮಾಡಿದರು.
ಸಾಲ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಿದವರ ಅರ್ಜಿಗಳನ್ನು ಬಾಕಿ ಉಳಿಸಿಕೊಳ್ಳದೇ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು ಎಂದು ಅಗ್ರಣೀಯ ಬ್ಯಾಂಕ್ ವ್ಯವಸ್ಥಾಪಕರಿಗೆ ಕಟ್ಟು ನಿಟ್ಟಾಗಿ ಸೂಚನೆ ನೀಡಿದರು.
ಬ್ಯಾಂಕ್ ಸಾಲಕ್ಕೆ ಅರ್ಜಿ ಸಲ್ಲಿಸಿದಾಗ, ದಾಖಲಾತಿಗಳು ಅಪೂರ್ಣ ಇದ್ದಲ್ಲಿ ತಿಳಿವಳಿಕೆ ನೀಡಿ, ಅರ್ಜಿಗಳನ್ನು ನಿಗದಿತ ಸಮಯದಲ್ಲಿ ವಿಲೇವಾರಿ ಮಾಡಿ, ಸರ್ಕಾರದ ಯೋಜನೆಗಳ ಸದುಪಯೋಗ ಪಡಿಸಿಕೊಳ್ಳಲು ಫಲಾನುಭವಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದರು.
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಸ್ವಾವಲಂಬಿ ಟ್ಯಾಕ್ಸಿ, ಗೂಡ್ಸ್, ಆಟೋ ರಿಕ್ಷಾ ಯೋಜನೆಗಳು  ಸೇರಿದಂತೆ ಅನೇಕ ಯೋಜನೆಗಳಿಗೆ ಅರ್ಜಿ ಸಲ್ಲಿಸಿರುವ ಅರ್ಹರೆಲ್ಲರ ಅರ್ಜಿಗಳನ್ನು ಬಾಕಿ ಉಳಿಸಿಕೊಳ್ಳಬಾರದು ಎಂದುಇದೇ ವೇಳೆ ಬ್ಯಾಂಕ್ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಅಲ್ಪಸಂಖ್ಯಾತರ ಸಮುದಾಯದವರಿಗಿರುವ ಸರ್ಕಾರದ ಯೋಜನೆಗಳು ಹಾಗೂ ಸೌಲಭ್ಯಗಳನ್ನು ಸಕಾಲಕ್ಕೆ ತಲುಪಿಸಬೇಕು. ಬದಲಿಗೆ ಫಲಾನುಭವಿಗಳಿಗೆ ಯೋಜನೆಗಳನ್ನು ತಲುಪಿಸುವಲ್ಲಿ ವಿಳಂಬ ಮಾಡಿದರೆ ಅಂತಹ ಅಧಿಕಾರಿಗಳವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಸಾಲ ಸೌಲಭ್ಯಕ್ಕಾಗಿ ಜಿಲ್ಲೆಯಲ್ಲಿ ಸ್ವೀಕರಿಸಿರುವ ಒಟ್ಟು ಅರ್ಜಿಗಳು, ಇತ್ಯರ್ಥಕ್ಕೆ ಬಾಕಿ ಇರುವ ಅರ್ಜಿಗಳ ಹಾಗೂ ಇತ್ಯರ್ಥಗೊಳ್ಳದಿರಲು ಕಾರಣ, ಎಷ್ಟು ಅವಧಿಯವರೆಗೆ ಅರ್ಜಿ ಮಂಜೂರಾತಿಗೆ ಬಾಕಿ ಉಳಿಸಿಕೊಂಡಿರುವ ಸಮಗ್ರ  ವರದಿಯನ್ನು ಸಲ್ಲಿಸುವಂತೆ ಇದೇ ವೇಳೆ ಅಗ್ರಣೀಯ ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಚಿಸಿದರು.
ಯಾವುದೇ ನಿರ್ಲಕ್ಷ್ಯ ವಹಿಸದೇ ವಿಲೇವಾರಿಗೆ ಕ್ರಮ ವಹಿಸಬೇಕು. ಸಭೆಗೆ ಮಾಹಿತಿಯೊಂದಿಗೆ ಆಗಮಿಸಬೇಕು. ಅಧಿಕಾರಿಗಳು ಕೇಳುವ ಮಾಹಿತಿ ನೀಡುವಲ್ಲಿ ನಿರ್ಲಕ್ಷ್ಯ ಸಲ್ಲದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಅಲ್ಪಸಂಖ್ಯಾತರ ಸಮುದಾಯದವರಿಗೆ ಸರ್ಕಾರ ಜಾರಿಗೊಳಿಸಿದ ವಿವಿಧ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ,ಸರ್ಕಾರದಿಂದ ದೊರೆಯುವ ವಿವಿಧ ಸೌಲಭ್ಯಗಳ ತಲುಪಿಸಬೇಕು ಎಂದರು.
ಸರ್ಕಾರ ಜಾರಿಗೊಳಿಸಿರುವ ಯೋಜನೆಗಳನ್ನು ಸದುಪಯೋಗ ಪಡೆಸಿಕೊಂಡು ಅಲ್ಪಸಂಖ್ಯಾತರು ಆರ್ಥಿಕವಾಗಿ ಹಾಗೂ ಸ್ವಾವಲಂಬನೆ ಬದುಕು ಕಟ್ಟಿಕೊಳ್ಳುವಂತೆ ಕ್ರಮ ಕೈಗೊಳ್ಳಬೇಕು ಎಂದರು.
ಶಿಕ್ಷಣಕ್ಕಾಗಿ ಒತ್ತು ನೀಡುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿನ ಅಲ್ಪಸಂಖ್ಯಾತ ಸಮುದಾಯದ ನಾಲ್ಕು ವರ್ಷ ವಯೋಮಾನದ ಮಕ್ಕಳು ಅಂಗನವಾಡಿ ಹಾಗೂ ನರ್ಸರಿ ಶಾಲೆಗೆ ದಾಖಲಾತಿಯಾಗಿರುವ ಹಾಗೂ ಆರು ವರ್ಷದ ಮಗು ಪ್ರಾಥಮಿಕ ಶಾಲಾ ವಿದ್ಯಾಭ್ಯಾಸದಲ್ಲಿ ಒಂದನೇ ತರಗತಿಯಲ್ಲಿ ಕಲಿಯುತ್ತಿರುವ ಮಕ್ಕಳ ಕುರಿತ ಸಮಗ್ರ ಮಾಹಿತಿಯನ್ನು ಕ್ರೋಢೀಕರಿಸಿ ಒದಗಿಸುವಂತೆ ಶಾಲಾ ಶಿಕ್ಷಣ ಇಲಾಖೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಕುರಿತು ಅಂಗನವಾಡಿಯಲ್ಲಿ ಓದುತ್ತಿರುವ ಮಕ್ಕಳ ಮಾಹಿತಿ ಮತ್ತು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಮಾಹಿತಿಯನ್ನು ಒದಗಿಸುವಂತೆಯೂ ಸೂಚಿಸಿದರು.
ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಅವರು ಮಾತನಾಡಿ, ಯಾವುದೇ ಫಲಾನುಭವಿಗಳ ಅರ್ಜಿಗಳು ಬ್ಯಾಂಕ್ ಗಳಲ್ಲಿ ಬಾಕಿ ಉಳಿಯದಂತೆ ಕ್ರಮ ಕೈಗೊಳ್ಳಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಣಾಧಿಕಾರಿಗಳಾದ ರಿಷಿ ಆನಂದ್,  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಲಕ್ಷ್ಮಣ್ ನಿಂಬರಗಿ, ವಿಜಯಪುರ ಉಪವಿಭಾಗಾಧಿಕಾರಿಗಳಾದ ಗುರುನಾಥ ದೊಡ್ಡಿ, ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ,  ಜಂಟಿ ಕೃಷಿ ನಿರ್ದೇಶಕರಾದ ಶಿವನಗೌಡ ಪಾಟೀಲ್ ಸೇರಿದಂತೆ ವಿಶೇಷ ಕರ್ತವ್ಯಾಧಿಕಾರಿ ಮುಜಿಬುಲ್ ಜಫಾರಿ, ಜಿಲ್ಲಾ ಮಟ್ಟದ ಸಮಿತಿ ಸದಸ್ಯರಾದ
ಸೈಯದ ನೂರುಲ್ ಹಸನ್ ಎಸ್.ಬೀಳಗಿಪೀರ,ಬಸೀರ ಅಹ್ಮದ ರಿಸಲ್ದಾರ,ಎಸ್.ಎಸ್.ತಜಂತ್ರಕ, ನೆಲ್ಸನ್ ನಾರ್ಮನ್ ಐಝಾಕ್,ಜ್ಯೋತಿಂದ್ರ ಆಯಿತವಾಡ,ಬಂದೇನವಾಜ ಮುಲ್ಲಾ,ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article