ಬೆಂಗಳೂರು: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ವಿದ್ಯಾರ್ಥಿಗಳಿಗಾಗಿ ಮಂಜೂರಾದ ಹಣವನ್ನು ತಮ್ಮ ಖಾತೆಗಳಿಗೆ ವರ್ಗಾಯಿಸಿಕೊಂಡು ವಂಚಿಸಿದ ಆರೋಪದ ಮೇಲೆ ಇಬ್ಬರು ಹೊರಗುತ್ತಿಗೆ ಸಿಬ್ಬಂದಿಯನ್ನು ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತಾತ್ಕಾಲಿಕ ಕಾರ್ಯದರ್ಶಿ ವಿ.ಸೌಂದರ್ಯ ಹಾಗೂ ಸಹಾಯಕಿ ಆರ್.ದೀಪಿಕಾ ಎಂಬಿಬ್ಬರನ್ನು ಬಂಧಿಸಲಾಗಿದೆ. ಇಬ್ಬರೂ ಸಹ ಹೊರಗುತ್ತಿಗೆ ಸಂಸ್ಥೆಯಾದ ವೆಂಕಟೇಶ್ವರ ಎಂಟರ್‌ಪ್ರೈಸಸ್ ಮೂಲಕ ನೇಮಕಗೊಂಡು ಐಐಎಸ್‌ಸಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು.
ಐಐಎಸ್‌ಸಿ ವಿದ್ಯಾರ್ಥಿಗಳ ವಿದೇಶ ಪ್ರಯಾಣಕ್ಕೆ ಪಾವತಿಸಬೇಕಾದ ಮುಂಗಡ ಹಣ ಅಂದಾಜು 80 ಲಕ್ಷ ರೂ.ಗಳನ್ನು ಇಬ್ಬರೂ ದುರ್ಬಳಕೆ ಮಾಡಿಕೊಂಡಿದ್ದರು. ಹಣ ಮಂಜೂರಾತಿ ಆದೇಶಗಳನ್ನು ತಿರುಚಿ, ವಿದ್ಯಾರ್ಥಿಗಳ ಬ್ಯಾಂಕ್ ಖಾತೆ ವಿವರಗಳನ್ನು ಕಾನೂನುಬಾಹಿರವಾಗಿ ಬದಲಾಯಿಸಿ ತಮ್ಮ ಕುಟುಂಬದ ಸದಸ್ಯರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದರು. ಸಂಸ್ಥೆಯ ಆಂತರಿಕ ತನಿಖೆಯಲ್ಲಿ ಇಬ್ಬರು ಹಣ ದುರ್ಬಳಕೆ ಮಾಡಿಕೊಂಡಿರುವುದು ಪತ್ತೆಯಾಗಿತ್ತು. ಇಬ್ಬರೂ ಸಹ ಕೃತ್ಯ ಎಸಗಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಸಂಸ್ಥೆಯ ರಿಜಿಸ್ಟ್ರಾರ್ ಶ್ರೀಧರ್ ವಾರಿಯರ್ ಅವರು ಸದಾಶಿವನಗರ ಠಾಣೆಗೆ ದೂರು ನೀಡಿದ್ದರು.


