ರಜೌರಿ: ಭಾರತೀಯ ಗಡಿಯೊಳಗೆ ಅಕ್ರಮವಾಗಿ ನುಸುಳಲು ಯತ್ನಿಸಿದ ಇಬ್ಬರು ಭಯೋತ್ಪಾದಕರನ್ನು ಭಾರತೀಯ ಸೇನೆ ಭಾನುವಾರ ರಾತ್ರಿ ಹೊಡೆದುರುಳಿಸಿದೆ. ಇಲ್ಲಿನ ರಾಜೌರಿ ಜಿಲ್ಲೆಯಲ್ಲಿ ಗುಂಡಿನ ಚಕಮಕಿ ನಡೆಯಿತು.
ಜಮ್ಮು-ಕಾಶ್ಮೀರ ಪೊಲೀಸ್ ಹಾಗು ಗುಪ್ತಚರ ಇಲಾಖೆ ಉಗ್ರರ ಒಳನುಸುಳುವಿಕೆಯ ಕುರಿತು ಸುಳಿವು ನೀಡಿತ್ತು. ಈ ಮಾಹಿತಿ ಆಧರಿಸಿ ಭಯೋತ್ಪಾದಕರ ಚಲನವಲನ ಪತ್ತೆ ಹಚ್ಚಿದ ಯೋಧರು ಕಾರ್ಯಾಚರಣೆ ಪ್ರಾರಂಭಿಸಿದ್ದರು. ಈ ವೇಳೆ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಕುರಿತು ಸೇನೆ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದೆ. ‘ಉಗ್ರರ ಒಳನುಸುಳುವಿಕೆ ಸಂಬಂಧಿಸಿದಂತೆ ಗುಪ್ತಚರ ಸಂಸ್ಥೆಗಳು ಮತ್ತು ಪೊಲೀಸರ ಮಾಹಿತಿಯ ಆಧಾರದಡಿ ಸೆಪ್ಟೆಂಬರ್ 8 ಮತ್ತು 9ರ ಮಧ್ಯರಾತ್ರಿ ನೌಶೇರಾದ ಲಾಮ್ ಸೆಕ್ಟರ್ ಪ್ರದೇಶದಲ್ಲಿ ಒಳನುಸುಳುವಿಕೆಯ ವಿರುದ್ಧ ಕಾರ್ಯಾಚರಣೆ ಪ್ರಾರಂಭಿಸಲಾಯಿತು. ಇಬ್ಬರು ನುಸುಳುಕೋರರನ್ನು ಹತ್ಯೆಗೈಯಲಾಗಿದೆ. ಎರಡು AK-47 ಗನ್, ಒಂದು ಪಿಸ್ತೂಲ್ ಸೇರಿದಂತೆ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಪ್ರಗತಿಯಲ್ಲಿದೆ’ ಎಂದು ತಿಳಿಸಿದೆ.