ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ಬಾಂದ್ರಾದಲ್ಲಿನ (ಪಶ್ಚಿಮ) ಗ್ಯಾಲಾಕ್ಸಿ ಅಪಾರ್ಟ್ಮೆಂಟ್ನ ನಿವಾಸಕ್ಕೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ, ಮುಂಬೈ ಪೊಲೀಸರು ಒಬ್ಬ ಪುರುಷ ಮತ್ತು ಮಹಿಳೆಯನ್ನು ಬಂಧಿಸಿದ್ದಾರೆ. ಮಂಗಳವಾರ ಮತ್ತು ಬುಧವಾರ ಈ ಘಟನೆಗಳು ಜರುಗಿದ್ದು, ನಟನ ಮನೆಯ ಸುತ್ತ ಹೆಚ್ಚುವರಿ ಭದ್ರತೆ ಒದಗಿಸಲಾಗಿದೆ.
“ಮಂಗಳವಾರ, ಛತ್ತೀಸ್‌ಗಢದ ಜಿತೇಂದ್ರ ಕುಮಾರ್ ಸಿಂಗ್ ಎಂಬ 23 ವರ್ಷದ ಯುವಕ ಗ್ಯಾಲಾಕ್ಸಿ ಅಪಾರ್ಟ್‌ಮೆಂಟ್ ಬಳಿ ನಿಂತಿದ್ದ” ಎಂದು ಬಾಂದ್ರಾ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ಬೆಳಗ್ಗೆ, ಸಲ್ಮಾನ್ ಖಾನ್ ಅವರ ಭದ್ರತೆಗಾಗಿ ನಿಯೋಜಿಸಲ್ಪಟ್ಟಿದ್ದ ಪೊಲೀಸ್ ಅಧಿಕಾರಿಯೊಬ್ಬರು ಜಿತೇಂದ್ರ ಕುಮಾರ್ ಸಿಂಗ್ ಅಲೆದಾಡುತ್ತಿರುವುದನ್ನು ಗಮನಿಸಿ ಅಲ್ಲಿಂದ ಹೊರಹೋಗುವಂತೆ ಹೇಳಿದರು. ಕೋಪಗೊಂಡ ಸಿಂಗ್, ತನ್ನ ಮೊಬೈಲ್ ಫೋನ್ ಅನ್ನು ನೆಲಕ್ಕೆ ಎಸೆದ” ಎಂದು ಮಾಹಿತಿ ನೀಡಿದ್ದಾರೆ.
ಆ ಸಂಜೆ, ಸಿಂಗ್ ಅದೇ ಕಟ್ಟಡದ ನಿವಾಸಿಯೊಬ್ಬರಿಗೆ ಸೇರಿದ ಕಾರನ್ನು ಬಳಸಿಕೊಂಡು ಗ್ಯಾಲಾಕ್ಸಿ ಅಪಾರ್ಟ್‌ಮೆಂಟ್ ಆವರಣಕ್ಕೆ ಪ್ರವೇಶಿಸಿದ್ದಾನೆ. ಆದರೆ, ಪೊಲೀಸರು ಮತ್ತೊಮ್ಮೆ ಆತನನ್ನು ತಡೆಯುವಲ್ಲಿ ಯಶಸ್ವಿಯಾದರು. ಅವನನ್ನು ಬಾಂದ್ರಾ ಪೊಲೀಸರೆದುರು ಹಾಜರುಪಡಿಸಿ, ನಂತರ ವಶಕ್ಕೆ ಪಡೆಯಲಾಯಿತು.
ವಿಚಾರಣೆ ಸಮಯದಲ್ಲಿ, ಜಿತೇಂದ್ರ ಕುಮಾರ್ ಸಿಂಗ್ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಭೇಟಿಯಾಗಲು ಬಯಸಿದ್ದಾಗಿ ಹೇಳಿದ್ದಾನೆ. “ಪೊಲೀಸರು ಕಟ್ಟಡಕ್ಕೆ ಪ್ರವೇಶಿಸಲು ಬಿಡದ ಕಾರಣ ತಾನು ಒಳಗೆ ನುಸುಳಲು ಪ್ರಯತ್ನಿಸಿದೆ ಎಂದು ಸಿಂಗ್ ಒಪ್ಪಿಕೊಂಡಿದ್ದಾನೆ” ಎಂದು ಅಧಿಕಾರಿ ತಿಳಿಸಿದರು. ಇನ್ನೂ ಗ್ಯಾಲಾಕ್ಸಿ ಅಪಾರ್ಟ್ಮೆಂಟ್ನ ನಿವಾಸಿಯ ವಾಹನವನ್ನು ಹೇಗೆ ಹತ್ತಿದ ಎಂಬುದರ ಕುರಿತಂತೆ ಪೊಲೀಸ್ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ.