ತುಂಗಭದ್ರಾ ಮಂಡಳಿ ಆಸ್ತಿ ಅತಿಕ್ರಮಣ: ಕಾನೂನು ಕ್ರಮದ ಎಚ್ಚರಿಕೆ – ತುಂಗಭದ್ರಾ ಡ್ಯಾಂ ಕಾರ್ಯದರ್ಶಿ ಓ ಆರ್. ವಿ. ರೆಡ್ಡಿ 

MK HasiruKranti
ತುಂಗಭದ್ರಾ ಮಂಡಳಿ ಆಸ್ತಿ ಅತಿಕ್ರಮಣ: ಕಾನೂನು ಕ್ರಮದ ಎಚ್ಚರಿಕೆ – ತುಂಗಭದ್ರಾ ಡ್ಯಾಂ ಕಾರ್ಯದರ್ಶಿ ಓ ಆರ್. ವಿ. ರೆಡ್ಡಿ 
WhatsApp Group Join Now
Telegram Group Join Now
ವಿಜಯನಗರ (ಹೊಸಪೇಟೆ) ಏ.01: ತುಂಗಭದ್ರಾ ಜಲಾಶಯದ ವ್ಯಾಪ್ತಿಗೆ ಒಳಪಡುವ ನೂರಾರು ಎಕರೆ ಪ್ರದೇಶವು ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ಸರ್ಕಾರಗಳ ಜಂಟಿ ಆಸ್ತಿಯಾಗಿದ್ದು, ಇಲ್ಲಿ ನಡೆಯುತ್ತಿರುವ ಯಾವುದೇ ಅನಧಿಕೃತ ಅತಿಕ್ರಮಣಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತುಂಗಭದ್ರಾ ಮಂಡಳಿಯ ಕಾರ್ಯದರ್ಶಿ ಓ.ಆರ್. ವಿ. ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.
ನಗರದ ತುಂಗಭದ್ರಾ ಜಲಾಶಯ ಆಡಳಿತ ಮಂಡಳಿಯ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
 ‘ಭಾರತೀಯ ಅಧಿಕೃತ ರಹಸ್ಯಗಳ ಕಾಯ್ದೆ 1923 ರ ಅನ್ವಯ ಜಲಾಶಯದ ಪ್ರದೇಶ, ಪವರ್ ಹೌಸ್ ಮತ್ತು ಸುತ್ತಮುತ್ತಲಿನ ಸ್ಥಳಗಳನ್ನು ‘ನಿಷೇಧಿತ ಪ್ರದೇಶ’ ಎಂದು ಘೋಷಿಸಲಾಗಿದೆ. ಹೊಸಕೋಟೆ ವ್ಯಾಪ್ತಿಯ 207.41 ಎಕರೆ ಹಾಗೂ ಅಮರಾವತಿ ವ್ಯಾಪ್ತಿಯ 488.74 ಎಕರೆ ಸೇರಿದಂತೆ ಒಟ್ಟು 696.15 ಎಕರೆ ಪ್ರದೇಶವು ಮಂಡಳಿಯ ಸ್ವಾಧೀನದಲ್ಲಿದೆ. ಇದರಲ್ಲಿ ಗಾರ್ಡನ್, ಹಿನ್ನೀರು, ನಿಶಾನಿ ಕ್ಯಾಂಪ್, ಅಮರಾವತಿ ಕಾಲೋನಿ ಹಾಗೂ ಹೆಚ್.ಇ.ಎಸ್ ಕಾಲೋನಿ ಪ್ರದೇಶಗಳು ಸಹ ಸೇರಿವೆ. ಪ್ರಸ್ತುತ ಮಂಡಳಿಯ ಜಾಗಕ್ಕೆ ಸಂಬಂಧಿಸಿದಂತೆ ವಿವಿಧ ಹಂತಗಳಲ್ಲಿ ಒಟ್ಟು 23 ಪ್ರಕರಣಗಳು ನ್ಯಾಯಾಲಯದಲ್ಲಿವೆ. ಇದರಲ್ಲಿ ಧಾರವಾಡ ಹೈಕೋರ್ಟ್ ಪೀಠ ಮತ್ತು ಹೊಸಪೇಟೆಯ ಸಿವಿಲ್ ನ್ಯಾಯಾಲಯಗಳಲ್ಲಿ ನಡೆಯುತ್ತಿರುವ ಉಲ್ಲಂಘನೆಯ ಪ್ರಕರಣಗಳೂ ಸಹ ಸೇರಿವೆ.
ಜಲಾಶಯದ ಸುರಕ್ಷತೆ ಮತ್ತು ಮಂಡಳಿಯ ಆಸ್ತಿಯನ್ನು ರಕ್ಷಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ. ಅದರಂತೆ ಮಂಡಳಿಯ ಜಾಗವನ್ನು ಅತಿಕ್ರಮಣ ಕುರಿತ ವಿವಿಧ ಹಂತಗಳಲ್ಲಿ ಒಟ್ಟು 23 ಪ್ರಕರಣ ದಾಖಲಾಗಿವೆ. ಈ ಪೈಕಿ ಒಂದು ಪ್ರಕರಣ ಇತ್ಯರ್ಥವಾಗಿದ್ದು, ಇದರಲ್ಲಿ ನಿವೃತ್ತ ನ್ಯಾಯಧೀಶೆ ಜಯಶ್ರೀ ಭಾಗಿಯಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸಪೇಟೆಯ ಜೆ ಎಂ ಎಫ್ ಸಿ ನ್ಯಾಯಾಲಯ ಮಾರ್ಚ್ 28ರಂದು ಮಂಡಳಿಯ ಪರ ಆದೇಶ ನೀಡಿ, ತುಂಗಭದ್ರಾ ಯೋಜನಾ ಪ್ರದೇಶದ ಅತಿಕ್ರಮಣಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿ, ಮಂಡಳಿಯು ತನ್ನ ವಶಕ್ಕೆ ಪಡೆಯಲು ಹಸಿರು ನಿಶಾನೆ ತೋರಿದೆ. ಆದ್ದರಿಂದ ಮಂಡಳಿಯ ಅನುಮತಿ ಇಲ್ಲದೆ ಈ ಜಾಗಗಳಲ್ಲಿ ಕಟ್ಟಡ ನಿರ್ಮಾಣ ಅಥವಾ ಇನ್ನಿತರೆ ಯಾವುದೇ ಚಟುವಟಿಕೆ ನಡೆಸುವುದು ಶಿಕ್ಷಾರ್ಹ ಅಪರಾಧ. ಈ ನಿಟ್ಟಿನಲ್ಲಿ ಸಾರ್ವಜನಿಕರು ಇಂತಹ ಅಕ್ರಮ ಅತಿಕ್ರಮಣದಾರರೊಂದಿಗೆ ಯಾವುದೇ ವ್ಯವಹಾರ ನಡೆಸಬಾರದು ಎಂದು ಅವರು ಮನವಿ ಮಾಡಿದರು.
ಮೇ ಅಂತ್ಯಕ್ಕೆ ಎಲ್ಲಾ ಕ್ರಸ್ಟ್ ಗೇಟ್ ಅಳವಡಿಕೆ ಪೂರ್ಣ:
ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಅಳವಡಿಕೆ ಕಾರ್ಯ ಭರದಿಂದ ಸಾಗಿದ್ದು, ಈಗಾಗಲೇ 22 ಗೇಟ್ ಅಳವಡಿಕೆ ಕಾರ್ಯ ಪೂರ್ಣಗೊಂಡಿದೆ. ಇನ್ನುಳಿದವು ಇದೇ ತಿಂಗಳಲ್ಲಿ ಮುಕ್ತಾಯವಾಗುವ ಭರವಸೆ ಕೂಡ ಇದೆ. ಅದರ ಜೊತೆಗೆ ಚೈನ್ ಅಳವಡಿಕೆ ಕಾರ್ಯವು ಮೇ ತಿಂಗಳ ಅಂತ್ಯಕ್ಕೆ ಪೂರ್ಣಗೊಂಡು ಜೂನ್ ನಲ್ಲಿ ಬರುವ ಮುಂಗಾರು ಮಳೆ ವೇಳೆಗೆ ಡ್ಯಾಮ್ ಸಂಪೂರ್ಣ ಸಿದ್ಧವಾಗಿರಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಇಂಜಿನಿಯರ್ ಎನ್.ಚಂದ್ರಶೇಖರ್, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಸ್. ನಾರಾಯಣ ನಾಯ್ಕ್ ಇತರರು ಇದ್ದರು.
WhatsApp Group Join Now
Telegram Group Join Now
Share This Article