ತಿರುಪತಿ: ತಿರುಮಲ ದೇವಸ್ಥಾನ ಆಡಳಿತ ಮಂಡಳಿ ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಇಒ) ಜೆ. ಶ್ಯಾಮಲಾ ರಾವ್ ಅವರು ಶ್ರೀವಾರಿ ಭಕ್ತರಿಗೆ ಟಿಟಿಡಿ ಒದಗಿಸುವ ಆನ್‌ಲೈನ್ ಅರ್ಜಿ ಸೇವೆಗಳಿಗೆ ಆಧಾರ್ ಲಿಂಕ್ ಮಾಡಲು ಮುಂದಾಗಿದ್ದು, ಇದರಿಂದ ಪಾರದರ್ಶಕತೆಯ ಜತೆಗೆ ದಲ್ಲಾಳಿ ವ್ಯವಸ್ಥೆಯನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ.
ತಿರುಪತಿಯ ಟಿಟಿಡಿ ಆಡಳಿತ ಭವನದ ಕಾನ್ಫರೆನ್ಸ್ ಹಾಲ್‌ನಲ್ಲಿ ಯುಐಡಿಎಐ (ಆಧಾರ್ ಸಂಸ್ಥೆ), ಟಿಸಿಎಸ್, ಜಿಐಒ ಮತ್ತು ಟಿಟಿಡಿಯ ಐಟಿ ವಿಭಾಗದ ಅಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಇಒ, ಇಲ್ಲಿಯವರೆಗೆ ಟಿಟಿಡಿ ಭಕ್ತರಿಗೆ ದರ್ಶನ, ವಸತಿ, ಆರ್ಜಿತ ಸೇವೆಗಳು, ಶ್ರೀವಾರಿ ಸೇವೆ ಮತ್ತಿತರ ಸೇವೆಗಳನ್ನು ಆನ್‌ಲೈನ್‌ನಲ್ಲಿ ಕಾಯ್ದಿರಿಸಲು ಅನುವು ಮಾಡಿಕೊಡಲಾಗುತ್ತಿದೆ.
ಆದರೆ, ಇನ್ನು ಮುಂದೆ ಆಧಾರ್ ಲಿಂಕ್ ಮಾಡುವ ಸಾಧ್ಯತೆಗಳನ್ನು ಪರಿಶೀಲಿಸುವಂತೆ ಮತ್ತು ಈ ಅರ್ಜಿಗಳನ್ನು ನಿಯಂತ್ರಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಇಒ ಐಟಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ನಿಟ್ಟಿನಲ್ಲಿ ಯುಐಡಿಐ ಅಧಿಕಾರಿಗಳ ಸಹಕಾರ ತೆಗೆದುಕೊಳ್ಳಬೇಕು. ಆಧಾರ್ ಮೂಲಕ ಯಾತ್ರಾರ್ಥಿಗಳ ಗುರುತಿಸುವಿಕೆ, ತಪಾಸಣೆ, ಬಯೋಮೆಟ್ರಿಕ್ ಪರಿಶೀಲನೆ, ಆಧಾರ್ ನಕಲು ತಡೆಯುವುದು ಹೇಗೆ ಇತ್ಯಾದಿ ವಿಷಯಗಳ ಕುರಿತು ಚರ್ಚಿಸಿದರು. ಯುಐಡಿಎಐ ಅಧಿಕಾರಿಗಳು ಪವರ್ ಪಾಯಿಂಟ್ ಪ್ರೆಸೆಂಟೇಶನ್ ಮೂಲಕ ಅರ್ಜಿಗಳಿಗೆ ಆಧಾರ್ ಅನ್ನು ಹೇಗೆ ಲಿಂಕ್ ಮಾಡುವುದು ಎಂಬ ಬಗ್ಗೆ ವಿವರಿಸಿದರು. ಶೀಘ್ರದಲ್ಲೇ ಈ ಬಗ್ಗೆ ಆಡಳಿತ ಮಂಡಳಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.