ಬಳ್ಳಾರಿ,ಅ.03: ಅಮೆರಿಕಾ ಅಧ್ಯಕ್ಷ ಟ್ರಂಪ್ನ ಸುಂಕ ದೌರ್ಜನ್ಯ ದಿಕ್ಕರಿಸಿ ದೇಶದ ಕೃಷಿ ಹಾಗೂ ಕೈಗಾರಿಕೆಗಳ ರಕ್ಷಿಸಿ ఎంబ ಶಿರೋನಾಮೆ ಅಡಿಯಲ್ಲಿ ರೈತ-ಕಾರ್ಮಿಕರ ಜಿಲ್ಲಾಮಟ್ಟದ ಜಂಟಿ ಸಮಾವೇಶವನ್ನು ನಗರದ ಗಾಂಧಿಭವನದಲ್ಲಿ ಅ.13ರಂದು ಬೆಳಿಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಯು.ಬಸವರಾಜ್ ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯು.ಬಸವರಾಜ್, ಅಮೇರಿಕಾ ದೇಶದ ಅಧ್ಯಕ್ಷ ಟ್ರಂಪ್ರವರು ಈಚೆಗೆ ಜಗತ್ತಿನ ಮೇಲೆ, ಆ ದೇಶಕ್ಕೆ ರಫ್ತು ಮಾಡಲಾದ ವಸ್ತುಗಳ ಮೇಲೆ ಆಮದು ಸುಂಕ ಹೆಚ್ಚಳ ಮಾಡುವ ಮೂಲಕ ಬೆದರಿಕೆ ಒಡ್ಡಿದ್ದಾರೆ. ನಮ್ಮ ದೇಶದಿಂದ ಆ ದೇಶದಲ್ಲಿ ಮಾರಾಟವಾಗುವ ವಸ್ತುಗಳ ಮೇಲೆಯೂ ಆಮದು ಸುಂಕವನ್ನು ಈ ಮೊದಲು ಶೇ.25 ರಷ್ಟು ಮತ್ತು ನಂತರ
ಮರಳಿ ಶೇ.25 ರಷ್ಟು ಒಟ್ಟಾರೆ ಶೇ.50 ರಷ್ಟು ಸುಂಕ ಹೇರಿದ್ದಾರೆ ಮಾತ್ರವಲ್ಲಾ ಶೇ 100 ರಷ್ಟು ಹೇರುವುದಾಗಿ ಮತ್ತು ತನ್ನಂತೆ ಯುರೋಪ್ ದೇಶಗಳು, ಭಾರತದ ವಸ್ತುಗಳ ಮೇಲೆ ಸುಂಕ ಹೇರುವಂತೆ ಒತ್ತಡ ಹೇರುತ್ತಿದ್ದಾರೆ.
ಇದರಿಂದ ನಮ್ಮ 100 ರೂಗೆ ಮಾರಾಟವಾಗುವ ವಸ್ತುಗಳ ಬೆಲೆ 150 ರೂ ಅಥವಾ 200 ರೂ ಗೆ ಹೆಚ್ಚಾಗಲಿದೆ. ಈ ಬೆಲೆ ಏರಿಕೆಯಿಂದ ವಸ್ತುಗಳು ಮಾರಾಟವಾಗದೇ ಹಾಗೆ ಉಳಿಯುವ ಅಪಾಯ ಬಂದಿದೆ. ಇದರಿಂದ ಭಾರತದ ಕೃಷಿ ಹಾಗು ಕೈಗಾರಿಕಾ ಉತ್ಪನ್ನಗಳು ಮಾರುಕಟ್ಟೆಯಿಲ್ಲದೆ, ಭಾರತದ ಕೃಷಿ ಹಾಗು ಕೈಗಾರಿಕೆಗಳು ಉತ್ಪಾದಿಸುವುದನ್ನು ರೈತರು ಅವರ ಕೃಷಿ ಉತ್ಪನ್ನಗಳಿಗೆ ಅಗತ್ಯ ಬೆಲೆ ದೊರೆಯದೆ ಸಾಲಬಾಧಿತರಾಗಲಿದ್ದಾರೆ. ಕಾರ್ಮಿಕರು ಉದ್ಯೋಗ ಕಳೆದುಕೊಳ್ಳಲಿದ್ದಾರೆ ಪರಿಣಾಮ ಮುಖ್ಯವಾಗಿ, ಗಾರ್ಮೆಂಟ್ ಉತ್ಪನ್ನಗಳಾದ ಉಡುಪುಗಳು, ಸೀಗಡಿ ಮೀನು, ಚರ್ಮದ ವಸ್ತುಗಳು, ಸಣ್ಣ ಕೈಗಾರಿಕೆಗಳ ಉತ್ಪನ್ನಗಳು, ಜನೌಷಧಿಗಳು ಮಾರುಕಟ್ಟೆಯ ಎದುರಿಸಿ ಲಕ್ಷಾಂತರ ಜನರ ಉದ್ಯೋಗಕ್ಕೆ ಮಾರಕವಾಗಲಿವೆ ಎಂದು ಅವರು ಕಳವಳವನ್ನು ವ್ಯಕ್ತಪಡಿಸಿದರು.
ಟ್ರಂಪ್ ರವರು ತಮ್ಮ ದೇಶದ ಕೃಷಿ ಹಾಗು ಕೈಗಾರಿಕಾ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ಒಂದೆಡೆ ತಮ್ಮ ದೇಶಕ್ಕೆ ಬರುವ ವಸ್ತುಗಳ ಮೇಲೆ ಆಮದು ಸುಂಕ ಹೇರುತ್ತಾ ಬೆದರಿಸುತ್ತಾ ತಮ್ಮ ದೇಶದ ಕೃಷಿ ಉತ್ಪನ್ನಗಳು, ಡೈರಿ ಉತ್ಪನ್ನಗಳು, ಮೀನು ಮುಂತಾದವುಗಳಿಗೆ ಸುಂಕ ವಿಲ್ಲದ ಮುಕ್ತ ಅವಕಾಶ ನೀಡುವಂತೆ ನಮ್ಮ ದೇಶವೂ ಸೇರಿದಂತೆ ಹಲವು ದೇಶಗಳ ಮೇಲೆ ಒತ್ತಡ ಹೇರುತ್ತಿದ್ದಾರೆ.
ಈಗಾಗಲೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಒತ್ತಡಕ್ಕೆ ಮಣಿದು ಹತ್ತಿಯ ಮೇಲಿದ್ದ ಶೇ.11ರ ಆಮದು ಸುಂಕವನ್ನು ವಾಪಾಸು ಪಡೆದು, ಲಕ್ಷಾಂತರ ಹತ್ತಿಬೆಳೆಗಾರ-ರಿಗೆ ಭಾರೀ ನಷ್ಟ ಉಂಟು ಮಾಡಿದ್ದಾರೆ. ಇನ್ನೊಂದು ಕಡೆ ಗಾರ್ಮೆಂಟ್ ಉತ್ಪನ್ನಗಳಾದ ಉಡುಪುಗಳ ರಫ್ತನ ಮೇಲೆ ಟ್ರಂಪ್ ಶೇ.50 ಸುಂಕ ಹೇರಿದ್ದಾರೆ. ಈ ಉಭಯ ದಾಳಿಗಳಿಂದ ರಾಜ್ಯದ 20 ಲಕ್ಷ ಎಕರೆ ಪ್ರದೇಶದ ಹತ್ತಿ ಬೆಳೆಗಾರರು, ಹತ್ತಿ ಆಧಾರಿತ ಜಿನ್ನಿಂಗ್ ಹಾಗೂ ಕಾಟನ್ ಮಿಲ್ಗಳು ಮತ್ತು ಗಾಮೆರ್ಂಟ್ ಇಂಡಸ್ಟ್ರಿಗಳು ತೀವ್ರ ಸಂಕಷ್ಟಕ್ಕೀಡಾಗಲಿವೆ. ಅಲ್ಲಿ ದುಡಿಯುವ ಲಕ್ಷಾಂತರ ಉದ್ಯೋಗಿಗಳು ಇದೀಗ ತೀವ್ರ ರೀತಿಯ ಉದ್ಯೋಗದ ಅಭದ್ರತೆಯಲ್ಲಿದ್ದಾರೆ.
ಅದೇ ರೀತಿ, ಅಮೇರಿಕಾ ಮೊದಲಾದ ಕಾರ್ಪೋರೇಟ್ ಕೃಷಿಯಾಧಾರಿತ ಸಾಮ್ರಾಜ್ಯವಾದಿ ರಾಷ್ಟ್ರಗಳ ಕೃಷಿ ಉತ್ಪನ್ನಗಳಾದ ಅಕ್ಕಿ, ಗೋದಿ, ಜೋಳ, ಅಡುಗೆ ಎಣ್ಣೆ, ಹಾಲು ಮೊಸರು, ತುಪ್ಪ ಮುಂತಾದ ಡೈರಿ ಉತ್ಪನ್ನಗಳು, ಮೀನು, ಕೋಳಿ ಮತ್ತಿತರೆ ಮಾಂಸಗಳು ಭಾರತಕ್ಕೆ ಮುಕ್ತವಾಗಿ ಆಮದಾದರೆ, ಭಾರತದ, ಕರ್ನಾಟಕ ರಾಜ್ಯದ ಮಾತ್ರವಲ್ಲಾ ಬಳ್ಳಾರಿ ಜಿಲ್ಲೆಯ ರೈತರು, ಕೂಲಿಕಾರರು, ದಲಿತರು, ಮಹಿಳೆಯರು, ಕಾರ್ಮಿಕರು ಕೃಷಿ ಹಾಗು ಕೈಗಾರಿಕೆಗಳು ಸ್ಪರ್ಧೆಯಲ್ಲಿ ಗೆಲ್ಲಲಾಗದೆ ನಷ್ಟಕ್ಕೀಡಾಗಿ ಬೀದಿ ಪಾಲಾಗಲಿದ್ದಾರೆ ಎಂದು ಯು.ಬಸವರಾಜ್ ವಿವರಿಸಿದರು.
ಅಮೇರಿಕಾ ಮೊದಲಾದ ಮುಂದುವರೆದ ದೇಶದ ಕೃಷಿ ಉದ್ಯಮಗಳು ಪಡೆಯುವ ಯಥೇಚ್ಚ ಸಹಾಯಧನಗಳು ಮತ್ತು ಅತ್ಯಾಧುನಿಕ ತಂತ್ರಜ್ಞಾನದಿಂದ ಉತ್ಪಾದಿಸುವ ಹೇರಳ ಇಳುವರಿಯಿಂದಾಗಿ, ಅವರ ವಸ್ತುಗಳು ಅಗ್ಗದರಕ್ಕೆ ಮಾರಾಟವಾಗಲಿವೆ. ಅದೇ ಭಾರತದ ಕೃಷಿಗೆ ಅಷ್ಟೇನು, ಸಹಾಯಧನ (ಕೇವಲ ಶೇ 3 ಕ್ಕಿಂತ ಕಡಿಮೆ) ವಿರದ ಮತ್ತು ಹಳೆಯ ಮಾದರಿಯ ತಂತ್ರಜ್ಞಾನದ ಹಾಗೂ ಸಣ್ಣ ಹಿಡುವಳಿಗಳ ಮೂಲಕ ಉತ್ಪಾದಿಸುವ ವಸ್ತುಗಳು ಸಹಜವಾಗಿಯೇ ದುಬಾರಿಯಾಗಲಿದೆ.
ಟ್ರಂಪ್ರವರ ಒತ್ತಡಗಳಿಗೆ ಅಮೇರಿಕಾ ಮೊದಲಾದ ಮುಂದುವರೆದ ದೇಶಗಳ ಉತ್ಪನ್ನಗಳಿಗೆ ಮುಕ್ತವಾಗಿ ದೇಶವನ್ನು ತೆರೆಯುವುದು ಕೇವಲ ಕೃಷಿ ಹಾಗೂ ಕೈಗಾರಿಕೆಗಳ ನಾಶಕ್ಕೆ ದಾರಿ ಮಾತ್ರವಲ್ಲಾ ದೇಶದ ಆಹಾರ ಭದ್ರತೆಗೆ, ಸ್ವಾವಲಂಬನೆಗೆ ಹಾಗೂ ಸಾರ್ವಭೌಮತೆಗೂ ಧಕ್ಕೆಯಾಗಲಿದೆ. ಆದ್ದರಿಂದ ಕೇಂದ್ರ ಸರಕಾರ ಟ್ರಂಪ್ ರವರ ಒತ್ತಡಕ್ಕೆ ಮಣಿಯಬಾರದು ಮತ್ತು ದ್ವಿಪಕ್ಷೀಯ ಒಪ್ಪಂದದ ಮುಕ್ತ ಆಮದು ನೀತಿಯನ್ನು ತಿರಸ್ಕರಿಸಬೇಕು ಹಾಗೂ ಅಮೇರಿಕಾ ಹೇರಿದ ಆಮದು ಸುಂಕವನ್ನು ಇಳಿಸಲು ಒತ್ತಾಯಿಸಬೇಕು. ಈ ಕುರಿತು ರಾಜ್ಯ ಸರಕಾರವೂ, ಕೇಂದ್ರ ಸರಕಾರದ ಮೇಲೆ ಅಗತ್ಯ ಒತ್ತಡವನ್ನು ಹೇರಬೇಕಾಗಿದೆ. ಹೀಗಾಗಿ, ಈ ಎರಡೂ ಸರಕಾರಗಳನ್ನು ಒತ್ತಾಯಿಸಿ, ಕೃಷಿ ಹಾಗು ಕೈಗಾರಿಕೆಗಳನ್ನು ರಕ್ಷಿಸಲು ಈ ಬಳ್ಳಾರಿ ಜಿಲ್ಲಾ ಮಟ್ಟದ ಜಂಟಿ ಸಮಾವೇಶವನ್ನು ಹಮ್ಮಿಕೊಂಡಿದ್ದೇವೆ ಎಂದು ಅವರು ವಿವ-ರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿವಿಧ ಸಂಘಟನೆಗಳ ಹೋರಾಟಗಾರರಾದ ಜೆ.ಸತ್ಯಬಾಬು, ವಿ.ಎಸ್.ಶಿವಶಂಕರ್, ಜೆ.ಎಮ್.ಚನ್ನಬಸಯ್ಯ, ತಿಪ್ಪೇಸ್ವಾಮಿ ಸೇರಿದಂತೆ ಇತರರಿದ್ದರು.


