ಬೆಂಗಳೂರು: ಭಾರತದಿಂದ ಆಮದಾಗುವ ಉತ್ಪನ್ನಗಳ ಮೇಲೆ ಶೇ 25ರಷ್ಟು ಹೆಚ್ಚುವರಿ ತೆರಿಗೆ ವಿಧಿಸುವ ಅಮೆರಿಕದ ನಿರ್ಧಾರ ಬುಧವಾರದಿಂದಲೇ ಜಾರಿಗೆ ಬಂದಿದೆ. ಇದರೊಂದಿಗೆ ಭಾರತದ ಉತ್ಪನ್ನಗಳ ಮೇಲಿನ ಅಮೆರಿಕದ ತೆರಿಗೆ ಪ್ರಮಾಣ ಶೇ 50ಕ್ಕೆ ಏರಿಕೆಯಾಗಿದೆ. ಇದರ ಬಿಸಿ ಕರ್ನಾಟಕಕ್ಕೆ, ಅದರಲ್ಲೂ ಬೆಂಗಳೂರಿಗೆ ಹೆಚ್ಚಾಗಿ ತಟ್ಟಿದೆ.
ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಉತ್ಪನ್ನಗಳ ತೆರಿಗೆ ಏರಿಕೆ ಮಾಡಿರುವುದಕ್ಕೆ ಜನ ಸಾಮಾನ್ಯರು, ರೈತರು ಹಾಗೂ ಐಟಿ ಉದ್ಯೋಗಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶೇ 50ರಷ್ಟು ತೆರಿಗೆಯಿಂದಾಗಿ ಕಾರ್ಮಿಕ ಕೇಂದ್ರಿತ ಹಾಗೂ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಮೇಲೆ ನೇರ ಹೊರೆ ಬೀಳುತ್ತಿದೆ. ಬೇಡಿಕೆ ಕುಸಿತದಿಂದ ಹಲವು ಕಂಪನಿಗಳಲ್ಲಿ ಉದ್ಯೋಗ ಕಡಿತದ ಆತಂಕ ಹೆಚ್ಚಾಗಲಿದೆ. ಭಾರತದ ಜಿಡಿಪಿಗೆ ಶೇ 0.2ರಿಂದ 1ರಷ್ಟು ಹೊಡೆತ ಬೀಳುವ ನಿರೀಕ್ಷೆ ಇದ್ದು ಭಾರತ ಇದನ್ನು ಹೇಗೆ ನಿಭಾಯಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.