ಮಂಡ್ಯ, ಸೆಪ್ಟೆಂಬರ್ 10: ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಗಣೇಶೋತ್ಸವ ಮೆರವಣಿಗೆ ಸಂದರ್ಭ ನಡೆದ ಕಲ್ಲು ತೂರಾಟ ಇದೀಗ ಕರ್ನಾಟಕದಾದ್ಯಂತ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ. ಮಸೀದಿಯಿಂದ ಕಲ್ಲು ತೂರಾಟ ಮಾಡಲಾಗಿತ್ತು ಎಂಬ ಆರೋಪದ ಕಾರಣ, ಪ್ರಕರಣ ರಾಜಕೀಯವಾಗಿಯೂ ಬಹಳಷ್ಟು ಸದ್ದು ಮಾಡುತ್ತಿದೆ. ಇದೀಗ, ಮದ್ದೂರಿನ ಚನ್ನೆಗೌಡ ಬಡಾವಣೆ ಬಳಿ ಇರುವ ಆ ಮಸೀದಿಯೇ ಅಕ್ರಮ ನಿರ್ಮಾಣ ಎಂಬ ಆರೋಪ ಮತ್ತೆ ಮುನ್ನೆಲೆಗೆ ಬಂದಿದೆ. ಮಸೀದಿಯನ್ನು ಅಕ್ರಮವಾಗಿ ನಿರ್ಮಾಣ ಮಾಡಲಾಗಿದೆ ಎಂದು ಸ್ಥಳೀಯರು ಜಿಲ್ಲಾಧಿಕಾರಿಗಳಿಗೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಕಾರ್ಯಾಲಯಕ್ಕೂ ಪತ್ರ ಬರೆದು ದೂರು ನೀಡಿದ್ದರು ಎಂಬುದು ತಿಳಿದುಬಂದಿದೆ.
ಅಕ್ರಮವಾಗಿ ಮಸೀದಿ ನಿರ್ಮಾಣಮಾಡಲಾಗಿದೆ. ಮಸೀದಿ ಮುಂದೆ ದೇವರ ಉತ್ಸವ, ಮೆರವಣಿಗೆಗಳು ಹಾದುಹೋಗಬಾರದೆಂಬ ನಿರ್ಬಂಧ ಹೇರಲಾಗಿದೆ. ಸತ್ತ ಹಿಂದೂಗಳ ಶವದ ಮುಂದೆ ತಮಟೆಯನ್ನೂ ಇಲ್ಲಿ ಬಾರಿಸದಂತೆ ನಿರ್ಬಂಧ ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಮಸೀದಿಯಲ್ಲಿ ಮದರಸಾ ನಡೆಸಲಾಗುತ್ತಿದ್ದು, ದೇಶದ್ರೋಹ ಚಟುವಟಿಕೆಗಳು ಕೂಡ ನಡೆಯುತ್ತಿವೆ. ಅಪರಿಚಿತ ವ್ಯಕ್ತಿಗಳು ರಾತ್ರಿ ಸಮಯ ಓಡಾಡುತ್ತಿದ್ದಾರೆ. ಅಕ್ರಮ ಹಣಕಾಸು ವಹಿವಾಟು ಕೂಡ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿಗಳಿಗೆ ನೀಡಿದ ದೂರಿನಲ್ಲಿ ಸ್ಥಳೀಯರು ಉಲ್ಲೇಖಿಸಿದ್ದರು ಎನ್ನಲಾಗಿದೆ.