ಸಾರಿಗೆ ಸಿಬ್ಬಂದಿ ಮುಷ್ಕರ: ಪ್ರತಿಕೂಲ ಸ್ಥಿತಿ ಎದುರಿಸಲು ತಾಲೂಕಾಡಳಿತ ಸಿದ್ಧತೆ

Pratibha Boi
ಸಾರಿಗೆ ಸಿಬ್ಬಂದಿ ಮುಷ್ಕರ: ಪ್ರತಿಕೂಲ ಸ್ಥಿತಿ ಎದುರಿಸಲು ತಾಲೂಕಾಡಳಿತ ಸಿದ್ಧತೆ
WhatsApp Group Join Now
Telegram Group Join Now

ಮುದ್ದೇಬಿಹಾಳ: ೫, ೬ ರಂದು ಎರಡು ದಿನಗಳ ಕಾಲ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಎಲ್ಲ ವಿಭಾಗಗಳ ಸಾರಿಗೆ ಸಿಬ್ಬಂದಿ ಮುಷ್ಕರಕ್ಕೆ ಕರೆ ನೀಡಿರುವುದರಿಂದ ಉಂಟಾಗಬಹುದಾದ ಸಂಭವನೀಯ ಪ್ರತಿಕೂಲ ಪರಿಸ್ಥಿತಿ ಎದುರಿಸಲು ತಾಲೂಕಾಡಳಿತ ಸಿದ್ದತೆ ನಡೆಸುತ್ತಿದೆ.
ಇದರ ಪೂರ್ವಭಾವಿಯಾಗಿ ರವಿವಾರ ರಜೆಯ ದಿನವಾದರೂ ಮದ್ಯಾಹ್ನದಿಂದ ಸಂಜೆಯವರೆಗೂ ತಹಶೀಲ್ದಾರ್ ಕಚೇರಿಯಲ್ಲಿ ತಹಶೀಲ್ದಾರ್ ಕೀರ್ತಿ ಚಾಲಕ್ ಅಧ್ಯಕ್ಷತೆಯಲ್ಲಿ ಪೊಲೀಸ್, ಸಾರಿಗೆ, ಶಿಕ್ಷಣ ಇಲಾಖೆಗಳ ಅಧಿಕಾರಿಗಳು, ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳ ಮತ್ತು ಖಾಸಗಿ ವಾಹನ ಮಾಲಿಕರ, ಚಾಲಕರ ಸಭೆ ನಡೆಯಿತು.
ಸೋಮವಾರ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಾರಿಗೆ ನೌಕರರ ಸಭೆ ನಡೆಯಲಿದೆ. ಆ ಸಭೆಯಲ್ಲಿ ಏನಾಗುತ್ತದೆ ಎನ್ನುವುದನ್ನು ನೋಡಿಕೊಂಡು ಮುಂದುವರೆಯಬೇಕಾಗುತ್ತದೆ. ಆದರೂ ಮುಂಜಾಗ್ರತಾ ಕ್ರಮವಾಗಿ ಮುಷ್ಕರದಿಂದ ಉಂಟಾಗಬಹುದಾದ ಪ್ರತಿಕೂಲ ಪರಿಣಾಮಗಳನ್ನು ಎದುರಿಸಲು ಸಿದ್ದತೆ ಮಾಡಿಕೊಳ್ಳಬೇಕು. ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಎಲ್ಲರ ಮೇಲಿದೆ. ಸಾರ್ವಜನಿಕರ ಸಂಚಾರಕ್ಕೂ ತೊಂದರೆ ಆಗದಂತೆ ಪರಿಸ್ಥಿತಿ ನಿಭಾಯಿಸಬೇಕಿದೆ ಎಂದು ತಹಶೀಲ್ದಾರ್ ತಿಳಿಸಿದರು.
ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶಾಲಾ ವಾಹನಗಳು ಇವೆ. ತಮ್ಮ ಶಾಲೆಗೆ ವಿದ್ಯಾರ್ಥಿಗಳನ್ನು ಕರೆದೊಯ್ದ ನಂತರ ಆ ವಾಹನಗಳನ್ನು ಬೇರೆ ಶಾಲೆಯ ವಿದ್ಯಾರ್ಥಿಗಳಿಗಾಗಿ ಬಳಸುವ ಕುರಿತು ಚಿಂತನೆ ನಡೆದಿದೆ. ಇದಕ್ಕೆ ಶಿಕ್ಷಣ ಸಂಸ್ಥೆಯವರು ತಯಾರಾಗಿದ್ದು ಯೋಜನೆ ರೂಪಿಸಿಕೊಳ್ಳಬೇಕು. ಪರಿಸ್ಥಿತಿಯ ದುರ್ಲಾಭ ಪಡೆದುಕೊಳ್ಳಲು ಖಾಸಗಿ ವಾಹನಗಳವರು ಪ್ರಯಾಣ ದರ ಹೆಚ್ಚಿಸುವ ಸಂಭವ ಇದ್ದು ಇದನ್ನು ತಡೆಯಲು, ಒಂದು ವೇಳೆ ಹೆಚ್ಚಿನ ಪ್ರಯಾಣ ದರ ವಸೂಲಿ ಮಾಡುವುದು ಕಂಡು ಬಂದಲ್ಲಿ ಅಂಥವರ ವಿರುದ್ಧ ಕ್ರಮ ಕೈಕೊಳ್ಳಲು ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಬೇಕು ಎಂದು ಅವರು ತಿಳಿಸಿದರು.
ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಅಧಿನದಲ್ಲಿ ಬರುವ ಇಲ್ಲಿನ ಸಾರಿಗೆ ಘಟಕದಲ್ಲಿ ಒಟ್ಟು ೧೩೭ ಬಸ್, ೧೩೧ ಶೆಡ್ಯೂಲ್‌ಗಳಿವೆ. ಒಟ್ಟು ೩೯೫ ಚಾಲಕ ನಿರ್ವಾಹಕರಿದ್ದಾರೆ. ಒಂದು ವೇಳೆ ಮುಷ್ಕರ ನಡೆದದ್ದೇ ಆದಲ್ಲಿ ಬಸ್ ಸೇವೆ ಸ್ಥಗಿತಗೊಳ್ಳಲಿದೆ. ಇಂಥ ಪರಿಸ್ಥಿತಿ ಬಂದಲ್ಲಿ ಜಿಲ್ಲಾಡಳಿತ ಆರ್‌ಟಿಓ ಮೂಲಕ ಮಾಡಿರುವ ವ್ಯವಸ್ಥೆಯ ಮೇಲುಸ್ತುವಾರಿಯನ್ನು ಸಾರಿಗೆ ಘಟಕದ ವ್ಯವಸ್ಥಾಪಕರು ನೋಡಿಕೊಳ್ಳುವಂತೆ ತಿಳಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿಯವರು ವಾಹನ ಸೌಲಭ್ಯ ಇರುವ ಶಿಕ್ಷಣ ಸಂಸ್ಥೆಗಳ ಪಟ್ಟಿ ಮಾಡಿ ಅಂಥ ಶಾಲೆಗಳ ಮುಖ್ಯಸ್ಥರ ಸಭೆ ನಡೆಸಿ ತಾಲೂಕಾಡಳಿತದೊಂದಿಗೆ ಸಹಕರಿಸುವಂತೆ ಮನವೊಲಿಸಲು ತಿಳಿಸಲಾಯಿತು. ಸಭೆಯಲ್ಲಿ ಪಾಲ್ಗೊಂಡಿದ್ದ ಕೆಲ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು ಸೋಮವಾರ ಶಾಲೆ ಪ್ರಾರಂಭಗೊಳ್ಳಲಿದ್ದು ಆಡಳಿತ ಮಂಡಳಿ, ಮುಖ್ಯಾಧ್ಯಾಪಕರೊಂದಿಗೆ ಚರ್ಚಿಸಿ ತಮ್ಮ ಅಂತಿಮ ತೀರ್ಮಾನ ತಿಳಿಸುವುದಾಗಿ ಕಾಲಾವಕಾಶ ಪಡೆದುಕೊಂಡರು.
ಪಟ್ಟಣ ಸೇರಿದಂತೆ ತಾಲೂಕಿನಲ್ಲಿರುವ ಖಾಸಗಿ ವಾಹನಗಳಾದ ಬಸ್, ಮಿನಿ ಬಸ್, ಕ್ರೂಜರ್ ಇನ್ನಿತರೆ ಪ್ರಯಾಣಿಕರ ಸಾಗಾಟಕ್ಕೆ ಬಳಸುವ ವಾಹನಗಳ ಸಂಖ್ಯೆಯ ಮಾಹಿತಿಯನ್ನು ತಾಲೂಕಾಡಳಿತ ಪಡೆದುಕೊಂಡಿತು. ಸಭೆಯಲ್ಲಿ ಪಾಲ್ಗೊಂಡಿದ್ದ ಸಿಪಿಐ ಮೆಹಮ್ಮೂದ್ ಫಸಿಯುದ್ದೀನ್, ಬಿಇಓ ಬಿ.ಎಸ್.ಸಾವಳಗಿ, ಸಾರಿಗೆ ಘಟಕ ವ್ಯವಸ್ಥಾಪಕ ಎ.ಎಂ.ಮದಭಾವಿ, ಖಾಸಗಿ ಶಾಲೆಗಳ ಪ್ರತಿನಿಧಿಗಳಾದ ಶಿವಕುಮಾರ ಬಿರಾದಾರ, ಅಶೋಕ ನಾಡಗೌಡ ಇನ್ನಿತರರು ಚರ್ಚೆಯಲ್ಲಿ ಪಾಲ್ಗೊಂಡು ಸಹಕರಿಸುವ ಭರವಸೆ ನೀಡಿದರು. ಕಂದಾಯ ನಿರೀಕ್ಷಕರಾದ ವೆಂಕಟೇಶ ಅಂಬಿಗೇರ, ಪವನ್ ತಳವಾರ ಇನ್ನಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಸೋಮವಾರ ನಡೆಯುವ ಬೆಳವಣಿಗೆ ಅವಲೋಕಿಸಿ ನಂತರ ಮತ್ತೊಮ್ಮೆ ಸಭೆ ನಡೆಸಿ ಅಂತಿಮ ತೀರ್ಮಾನ ಕೈಕೊಳ್ಳಲಾಗುತ್ತದೆ ಎಂದು ತಹಶೀಲ್ದಾರ್ ಕೀರ್ತಿ ಅವರು ಉದಯವಾಣಿಗೆ ತಿಳಿಸಿದರು.

WhatsApp Group Join Now
Telegram Group Join Now
Share This Article