ಜಲ್ ಜೀವನ ಮಿಷನ್-ನಲ್ ಜಲ್ ಮಿತ್ರ ಯೋಜನೆಯಡಿ ಸ್ವಸಹಾಯ ಸಂಘದ ಸದಸ್ಯರಿಗೆ ತರಬೇತಿ

Ravi Talawar
ಜಲ್ ಜೀವನ ಮಿಷನ್-ನಲ್ ಜಲ್ ಮಿತ್ರ ಯೋಜನೆಯಡಿ ಸ್ವಸಹಾಯ ಸಂಘದ ಸದಸ್ಯರಿಗೆ ತರಬೇತಿ
WhatsApp Group Join Now
Telegram Group Join Now
ಧಾರವಾಡ  :  ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ಯ ಇಲಾಖೆ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಕರ್ನಾಟಕ ರಾಜ್ಯ ಜೀವನೋಪಾಯ ಅಭಿಯಾನ, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಧಾರವಾಡ ಹಾಗೂ ಜಿಲ್ಲಾ ಪಂಚಾಯತ ಸಹಯೋಗದೊಂದಿಗೆ ಜಲ್ ಜೀವನ ಮಿಷನ್‍ದ ನಲ್ ಜಲ್ ಮಿತ್ರ ಯೋಜನೆಯಡಿಯಲ್ಲಿ ನೀರು ವಿತರಣಾ ನಿರ್ವಾಹಕರು ಜಾಬ್ ರೋಲ್-ನಲ್ ಜಲ್ ಮಿತ್ರ ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ಧಾರವಾಡ ತಾಲೂಕಿನ ಮುಮ್ಮಿಗಟ್ಟಿಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಡಿಸೆಂಬರ 24 ರಂದು ತರಬೇತಿ ಆಯೋಜಿಸಲಾಗಿತ್ತು.
 ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪಾ ಟಿ. ಕೆ. ಅವರು ತರಬೇತಿ  ಉದ್ಘಾಟಿಸಿ ಮಾತನಾಡಿ, 17 ದಿನಗಳ ತರಬೇತಿ ಕಾರ್ಯಾಗಾರದ ಸದುಪಯೋಗವನ್ನು ಸ್ವ-ಸಹಾಯ ಸಂಘಗಳಿಂದ ಬಂದಂತಹ ಮಹಿಳಾ ಫಲಾನುಭವಿಗಳು ಪಡೆದುಕೊಳ್ಳಬೇಕು ಎಂದರು. ಅವರು ಸರ್ಕಾರದ ವಿವಿಧ ಕಾರ್ಯಕ್ರಮಗಳ ಬಗ್ಗೆ ಶಿಬಿರಾರ್ಥಿಗಳಿಗೆ ಮಾಹಿತಿ ನೀಡಿ, ಅವರೊಂದಿಗೆ ಸಂವಾದಿಸಿದರು.  ಮಹಿಳೆಯರು ಸಬಲರಾಗಿ, ಸ್ವಾವಲಂಬಿ ಹಾಗೂ ಸ್ವಶಕ್ತ ಜೀವನವನ್ನು ನಡೆಸಲು ಸ್ವ ಉದ್ಯೋಗಿಗಳಾಗುವಂತೆ ಉತ್ತೇಜನ ನೀಡಿದರು.
ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ರವೀಂದ್ರ ದ್ಯಾಬೇರಿ ಮಾತನಾಡಿ, ನಲ್ ಜಲ್ ಮಿತ್ರ ಯೋಜನೆಯಡಿ ಅಳ್ನಾವರ, ಹುಬ್ಬಳ್ಳಿ, ಧಾರವಾಡ ತಾಲೂಕುಗಳ ಗ್ರಾಮ ಪಂಚಾಯತಿಯ ಸ್ವ-ಸಹಾಯ ಸಂಘಗಳಿಂದ ಒಟ್ಟು 30 ಜನ ಅಭ್ಯರ್ಥಿಗಳಿಗೆ ನೀರು ವಿತರಣಾ ನಿರ್ವಾಹಣೆ ಕುರಿತು 17 ದಿನಗಳ ತರಬೇತಿ ನೀಡಲಾಗುತ್ತದೆ. 21 ದಿನಗಳ ಅವಧಿಯ ಉದ್ಯೋಗ ಆಧಾರಿತ ತರಬೇತಿ ಕಾರ್ಯಕ್ರಮವನ್ನು ವಿವಿಧ ತಾಲೂಕಿನ ಗ್ರಾಮ ಪಂಚಾಯತಿಗಳಲ್ಲಿ ನೀಡಲಾಗುತ್ತದೆ. ತರಬೇತಿಯನ್ನು ಪೂರ್ಣಗೊಳಿಸಿದ ನಂತರ ಫಲಾನುಭವಿಗಳಿಗೆ ಸರ್ಕಾರದಿಂದ ಪ್ರಮಾಣ ಪತ್ರ, ಸಮವಸ್ತ್ರ, ಟೂಲ್‍ಕಿಟ್‍ಗಳನ್ನು ವಿತರಿಸಲಾಗುತ್ತದೆ.  ಈ ಯೋಜನೆಯ ಸದುಪಯೋಗ ಪಡೆಯುವಂತೆ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕಿ ರೇಖಾ ಡೊಳ್ಳಿನವರ,  ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಜಗದೀಶ ಪಾಟೀಲ ಹಾಗೂ ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕ ರವಿ ಎ. ಎನ್. ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
17 ದಿನಗಳ ಈ ತರಬೇತಿ ಕಾರ್ಯಕ್ರಮದಲ್ಲಿ ವಿವಿಧ ಗ್ರಾಮಪಂಚಾಯಿತಿಗಳ ಸ್ವಸಹಾಯ ಸಂಘದ ಸದಸ್ಯರು ಭಾಗವಹಿಸಿದ್ದರು.
WhatsApp Group Join Now
Telegram Group Join Now
Share This Article