ಬಾಗಲಕೋಟೆ, ಆಗಸ್ಟ್.08: ಬಾಗಲಕೋಟೆ ಪ್ರವಾಸೋದ್ಯಮ ಇಲಾಖೆಯ 2 ಕೋಟಿ 47 ಲಕ್ಷ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಮತ್ತಷ್ಟು ಆರೋಪಿಗಳು ಬಲೆಗೆ ಬಿದ್ದಿದ್ದಾರೆ. ಇದುವರೆಗೂ ಒಟ್ಟು 19 ಜನರನ್ನು ಬಂಧಿಸಲಾಗಿದೆ. ಅತಿ ಶೀಘ್ರದಲ್ಲೇ ಸಿಐಡಿಗೆ ಈ ಪ್ರಕರಣವನ್ನು ಹಸ್ತಾಂತರಿಸಲು ತಯಾರಿ ನಡೆದಿದೆ.
2021 ರಿಂದ 2024 ರವರೆಗೆ 54 ಬಾರಿ 33 ಖಾತೆಗೆ ಅಕ್ರಮ ಹಣ ವರ್ಗಾವಣೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಬಾಗಲಕೋಟೆ ಐಡಿಬಿಐ ಬ್ಯಾಂಕ್ ಗುತ್ತಿಗೆ ನೌಕರ ಸೇಲ್ಸ್ ಎಕ್ಸಿಕ್ಯೂಟಿವ್, ಕಿಂಗ್ ಪಿನ್ ಸೂರಜ್ ಸಗರ, ಐಡಿಬಿಐ ಬ್ಯಾಂಕ್ ಅಸಿಸ್ಟೆಂಟ್ ಮ್ಯಾನೇಜರ್ ಗಳಾದ ನಿಶಾ ಹಾಗೂ ಸರಸ್ವತಿ, ಬ್ಯಾಂಕ್ ಪಬ್ಲಿಕ್ ರಿಲೇಷನ್ಶಿಪ್ ಆಫಿಸರ್ ವಿದ್ಯಾಧರ ಹಿರೆಮಠ, ಲೋನ್ ವಿಭಾಗದ ಅಸಿಸ್ಟೆಂಟ್ ಮ್ಯಾನೇಜರ್ ರೋಹಿತ್, ಹಣ ಹಾಕಿಸಿಕೊಂಡ 14 ಜನ ಸೇರಿ ಒಟ್ಟು 19 ಜನರನ್ನು ಬಂಧಿಸಲಾಗಿದೆ.
ಹಣ ಹಾಕಿಸಿಕೊಂಡ ಖಾತೆದಾರರು 30%, 50% ಕಮಿಷನ್ ಪಡೆದು ಹಣ ಸೂರಜ್‌ಗೆ ಮರಳಿಸುತ್ತಿದ್ದರು. ನಂತರ ಸೂರಜ್ ಹಾಗೂ ಆರೋಪಿ ಬ್ಯಾಂಕ್ ಸಿಬ್ಬಂದಿ ಹಣ ಹಂಚಿಕೊಳ್ತಿದ್ದರು. ಸದ್ಯ ಇದೀಗ ಈ ಘಟನೆ ಸಂಬಂಧ 19 ಜನರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.
ಇನ್ನು ಬಂಧಿತ ಆರೋಪಿಗಳು ಪ್ರವಾಸೋದ್ಯಮ ಇಲಾಖೆ ಜೊತೆಗೆ ಇತರೆ ನಾಲ್ಕು ಇಲಾಖೆ ಹಣ ಕೂಡ ಅಕ್ರಮ ವರ್ಗಾವಣೆ ಮಾಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ 79 ಲಕ್ಷ 75 ಸಾವಿರ, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ 86 ಲಕ್ಷದ 40 ಸಾವಿರ, ಕೈಮಗ್ಗ ಮತ್ತು ಜವಳಿ ಇಲಾಖೆಯ 18 ಲಕ್ಷದ 15 ಸಾವಿರ, ಹಿಂದುಳಿದ ವರ್ಗ ಕಲ್ಯಾಣ ಇಲಾಖೆಯ 1 ಕೋಟಿ 76 ಲಕ್ಷದ 58 ಸಾವಿರ ಸೇರಿ ಒಟ್ಟು ಐದು ಇಲಾಖೆಯ 6 ಕೋಟಿ ವಂಚನೆ ನಡೆದಿದೆ. ಇತರೆ ಖಾತೆಗಳ ವಂಚನೆಯಲ್ಲೂ ಇವರದ್ದೇ ಕೈವಾಡ ಇರುವುದು ಬಹುತೇಕ ಖಚಿತವಾಗಿದೆ. ವಂಚನೆ ಹಣ ಆರು ಕೋಟಿಗೆ ತಲುಪಿದ ಹಿನ್ನೆಲೆ ಸಿಐಡಿಗೆ ಪ್ರಕರಣವನ್ನು ಹಸ್ತಾಂತರಿಸುವ ಸಾಧ್ಯತೆ ಇದೆ.