ಹಸಿರು ಕ್ರಾಂತಿ ವರದಿ ಜಮಖಂಡಿ: ತಾಲ್ಲೂಕಿನ ಹುಲ್ಯಾಳ ಗುರುದೇವಾಶ್ರಮದ ಶ್ರೀಗುರುದೇವ ಸತ್ಸಂಗ ಬಳಗದ ಆಶ್ರಯದಲ್ಲಿ ಪ್ರತಿ ತಿಂಗಳ ೪ನೇ ಭಾನುವಾರ ಹಮ್ಮಿಕೊಳ್ಳುವ ‘ಶ್ರೀಗುರುದೇವ ಸತ್ಸಂಗ’ ಮಾಸಿಕ ಕಾರ್ಯಕ್ರಮ ಅ.೨೬ ರಂದು ಸಂಜೆ ೬.೦೦ ಗಂಟೆಗೆ ಜರುಗಲಿದೆ ಎಂದು ಹರ್ಷಾನಂದ ಮಹಾಸ್ವಾಮಿಗಳು ತಿಳಿಸಿದ್ದಾರೆ.
ಕಾರ್ಯಕ್ರಮದ ಅಂಗವಾಗಿ ವೇದಾಂತಕೇಸರಿ ಪೂಜ್ಯಶ್ರೀ ಮಲ್ಲಿಕಾರ್ಜುನ ಮಹಾಶಿವಯೋಗಿಗಳವರ ಹಾಗೂ ಜ್ಞಾನಯೋಗಿ ಪೂಜ್ಯಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳವರ ಜಯಂತ್ಯುತ್ಸವ ಜರುಗಲಿದೆ.
ವಿಜಯಪುರ ಜ್ಞಾನಯೋಗಾಶ್ರಮದ ಬಸವಲಿಂಗ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸುವರು.
ಹಂಚಿನಾಳ ಭಕ್ತಿಯೋಗಾಶ್ರಮದ ಮಹೇಶಾನಂದ ಮಹಾಸ್ವಾಮಿಗಳು ‘ಮಲ್ಲಿಕಾರ್ಜುನ ಮಹಾಶಿವಯೋಗಿಗಳ ಜೀವನ ಸಂದೇಶ’ ಹಾಗೂ ಜಮಖಂಡಿಯ ಬಸವಜ್ಯೋತಿ ಶಿಕ್ಷಣ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ಪ್ರೊ.ಬಸವರಾಜ ಕಡ್ಡಿ ‘ಸಿದ್ಧೇಶ್ವರ ಶ್ರೀಗಳ ಸಂದೇಶ’ ಕುರಿತು ಉಪನ್ಯಾಸ ನೀಡಲಿದ್ದಾರೆ.
ಮೈಗೂರಿನ ಶಿವಾನಂದ ಮಠದ ಗುರುಪ್ರಸಾದ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ. ಶ್ರೀಗುರುದೇವ ಸಂಗೀತ ಬಳಗದಿಂದ ಸಂಗೀತ ಸೇವೆ ನಡೆಯಲಿದೆ. ದಾಂಡೇಲಿಯ ಸಾತಗೌಡ ಮಾದಗೌಡ ಪಾಟೀಲ ಮಹಾಪ್ರಸಾದದ ದಾಸೋಹ ಸೇವೆ ನೆರವೇರಿಸಲಿದ್ದಾರೆ.
ವೇದಾಂತಕೇಸರಿ ಮಲ್ಲಿಕಾರ್ಜುನ ಶಿವಯೋಗಿಗಳಿಂದ ಲಿಂಗದೀಕ್ಷೆ ಪಡೆದ ದಾಂಡೇಲಿಯ ವಲಯ ಅರಣ್ಯಾಧಿಕಾರಿ ಅಶೋಕ ಪಾಟೀಲ, ಬೆಳಗಾವಿಯ ಶ್ರೀಮಲ್ಲಿಕಾರ್ಜುನ ವಿದ್ಯಾಪೀಠದ ಜಿ.ಎಂ. ಪಾಟೀಲ ಅವರಿಗೆ ವಿಶೇಷ ಸನ್ಮಾನ ನೆರವೇರಿಸಲಾಗುವುದು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದ್ದಾರೆ.


