ಬಳ್ಳಾರಿ, ಸೆಪ್ಟೆಂಬರ್ 26: ತಿರುಪತಿ ಲಡ್ಡು ವಿವಾದ ಪರೋಕ್ಷವಾಗಿ ಕರ್ನಾಟಕದ ಕೆಎಂಎಫ್ನ ನಂದಿನಿ ಬ್ರ್ಯಾಂಡ್ಗೆ ನೆರವಾಯಿತಾ? ಹೀಗೊಂದು ಪ್ರಶ್ನೆ ಮೂಡಲು ಕಾರಣ ಇದೆ. ತಿರುಪತಿ ಲಡ್ಡು ವಿವಾದದ ಬಳಿಕ ನಂದಿನಿ ಹಾಲು ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.
ಮತ್ತೊಂದೆಡೆ, ಕಲಬೆರಕೆ ತುಪ್ಪ ಮತ್ತು ಹಾಲಿನ ಉತ್ಪನ್ನಗಳ ಆತಂಕದಿಂದಾಗಿ ಜನರಲ್ಲಿಯೂ ನಂದಿನಿ ಹಾಲು ಮತ್ತು ನಂದಿನಿ ಉತ್ಪನ್ನಗಳ ಮೇಲೆ ಒಲವು ಹೆಚ್ಚಾಗಿದೆ ಎಂದು ನಂದಿನಿ ಮೂಲಗಳು ತಿಳಿಸಿವೆ.
ಇದೀಗ ನಂದಿನಿ ಏಜೆನ್ಸಿಗಳನ್ನು ತೆರೆಯಲು ಅರ್ಜಿ ಸಲ್ಲಿಸುವರರ ಸಂಖ್ಯೆಯೂ ಹೆಚ್ಚಾಗಿದೆ ಎಂದು ಬಳ್ಳಾರಿ ರಾಬಕೋವಿ ಹಾಲು ಒಕ್ಕೂಟದ ಎಂಡಿ ಪೀರ್ಯಾ ನಾಯ್ಕ್ ತಿಳಿಸಿದ್ದಾರೆ. ಬೇಡಿಕೆ ಎಷ್ಟು ಹೆಚ್ಚಾದರೂ ಪೂರೈಕೆ ಮಾಡಲು ನಾವು ಸಿದ್ಧರಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಬಳ್ಳಾರಿ ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ ಪ್ರತಿ ದಿನ 2.20 ಲಕ್ಷ ಲೀಟರ್ ಹಾಲು ಖರೀದಿ ಮಾಡಲಾಗುತ್ತಿದೆ. ಪ್ರತಿ ದಿನಕ್ಕೆ 1.50 ಲಕ್ಷ ಲೀಟರ್ ಹಾಲು ಮಾರಾಟ ಮಾಡುತ್ತಿದ್ದೇವೆ. ಪ್ರತಿ ದಿನ 10 ಸಾವಿರ ಲೀಟರ್ ಮೊಸರು ಮಾರಾಟ ಮಾಡಲಾಗುತ್ತಿದೆ. ಪ್ರತಿ ದಿನ 500 ಕೆಜಿ ತುಪ್ಪ ಮಾರಾಟ ಮಾಡಲಾಗುತ್ತಿದೆ ಎಂದು ಪೀರ್ಯಾ ನಾಯ್ಕ್ ಮಾಹಿತಿ ನೀಡಿದ್ದಾರೆ. ಸದ್ಯ ತಿರುಪತಿ ತಿರುಮಲ ದೇಗುಲ ಆಡಳಿತ ಮಂಡಳಿ ಕೂಡ ಲಡ್ಡು ತಯಾರಿಕೆಗಾಗಿ ನಂದಿನಿ ತುಪ್ಪವನ್ನೇ ಬಳಸುತ್ತಿದೆ.