ಬಳ್ಳಾರಿ,ಜೂ.02 ಕೃಷಿ ಪರಿಕರ ಮಾರಾಟಗಾರರು ರೈತರಿಗೆ ಉತ್ತಮ ಗುಣಮಟ್ಟದ ಬೀಜ, ರಸಗೊಬ್ಬರ, ಕೀಟನಾಶಕ ಒದಗಿಸಬೇಕು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ತಿರುಮಲೇಶ ಹೇಳಿದರು.
ನಗರದ ಬಿಡಿಎಎ ಸಭಾಂಗಣದಲ್ಲಿ ಬಳ್ಳಾರಿ ಹಾಗೂ ಕುರುಗೋಡು ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ಕೃಷಿ ಪರಿಕರ ಮಾರಾಟಗಾರರ ಜೊತೆ ಶನಿವಾರ ಏರ್ಪಡಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಧಿಕೃತ ಕಂಪನಿಗಳ ಕೃಷಿ ಪರಿಕರಗಳನ್ನು ಮಾತ್ರ ಮಾರಾಟ ಮಾಡಬೇಕು. ನಿಗಧಿತ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಬಾರದು. ಒಂದು ವೇಳೆ ನಿಯಮ ಉಲ್ಲಂಘನೆ ಕಂಡು ಬಂದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮಾರಾಟ ಮಳಿಗೆಯು ಕೇವಲ ಮಾರಾಟವಲ್ಲದೇ ರೈತರಿಗೆ ಕೃಷಿ ಮಾಹಿತಿ ಕೇಂದ್ರವಾಗಬೇಕು ಎಂದು ಸೂಚಿಸಿದರು.
ಸಹಾಯಕ ಕೃಷಿ ನಿರ್ದೇಶಕ ಮುಜಿಬುರ್ ರೆಹಮಾನ್ ಅವರು ಮಾತನಾಡಿ, ಕೃಷಿ ಪರಿಕರ ಮಾರಾಟಗಾರರರು ಬೀಜ, ರಸಗೊಬ್ಬರ, ಕೀಟನಾಶಕ ಕಾಯ್ದೆಗಳನ್ವಯ ಕಟ್ಟುನಿಟ್ಟಾಗಿ ನಿಯಮ ಪಾಲಿಸಿ ಕಾರ್ಯ ನಿರ್ವಹಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಕೃಷಿ ಉಪ ನಿರ್ದೇಶಕ ಕೆಂಗೇಗೌಡ, ಸಹಾಯಕ ಕೃಷಿ ನಿರ್ದೇಶಕ ದಯಾನಂದ ಎಂ., ಕೆ.ನಾಗರಾಜ ಸೇರಿದಂತೆ ಜಿಲ್ಲೆಯ ಎಲ್ಲ ಕೃಷಿ ಪರಿಕರ ಮಾರಾಟಗಾರರು ಉಪಸ್ಥಿತರಿದ್ದರು.