ಬೆಂಗಳೂರು,ಏ.06: ಪ್ರತಿ ಸಮುದಾಯದಲ್ಲಿ ಕೆಲವರು ಪುಂಡ ಸಂಸ್ಕೃತಿಯುಳ್ಳವರು ಇರುತ್ತಾರೆ. ಅವರನ್ನು ಗುರುತಿಸಿ ಬುದ್ದಿಹೇಳಿ ನಿಯಂತ್ರಣ ಮಾಡಿದರೆ ಎಲ್ಲವೂ ನೆಟ್ಟಗಾಗುತ್ತೆ. ಇಲ್ಲವೆಂದರೆ ಇವತ್ತು ಭಗವಾ ಧ್ವಜ ಇಳಿಸುತ್ತಾರೆ, ನಾಳೆ ರಾಷ್ಟ್ರಧ್ವಜ ಇಳಿಸುತ್ತಾರೆ, ದೇಶಕ್ಕೇ ಬೆಂಕಿ ಹಚ್ಚುತ್ತಾರೆ ಎಂದು ಹೈಕೋರ್ಟ್ ಮೌಖಿಕವಾಗಿ ಕಿಡಿಕಾರಿದೆ.
ಶಿಗ್ಗಾಂವಿ ತಾಲ್ಲೂಕಿನ ಕಾರಡಗಿ ಗ್ರಾಮದ ಜುಮ್ಮಾ ಮಸೀದಿಯ ಪಕ್ಕದಲ್ಲಿರುವ ಸರ್ಕಾರಿ ಶಾಲೆಯ ಎದುರಿಗಿನ ಸಾರ್ವಜನಿಕ ರಸ್ತೆಯಲ್ಲಿ ಹಲವಾರು ವರ್ಷಗಳಿಂದ ಇರುವ ಭಗವಾ ಧ್ವಜವನ್ನು ಕೆಳಗಿಳಿಸಿ ಗ್ರಾಮದಲ್ಲಿ ಕೋಮು ಸೌಹಾರ್ದ ಕದಡಲು ಪಿತೂರಿ ನಡೆಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಹುಲಗೂರು ಪೊಲೀಸರು ದಾಖಲಿಸಿರುವ ದೂರನ್ನು ರದ್ದು ಮಾಡಲು ಕೋರಿ ಶಿಗ್ಗಾಂವಿಯ ಮಾಜಿ ಶಾಸಕ ಸೈಯ್ಯದ್ ಅಜ್ಜಂಪೀರ್ ಖಾದ್ರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ಏಕಸದಸ್ಯ ಪೀಠ ನಡೆಸಿತು.
ಎಫ್‌ಐಆರ್‌ನಲ್ಲಿ ಆರೋಪಿಗಳು ಬಳಸಿರುವ ಅದರಲ್ಲೂ ಮಾಜಿ ಶಾಸಕರ ಭಾಷೆಯನ್ನು ಗಮನಿಸಿದರೆ ಒಂದಿನಿತೂ ಸೌಜನ್ಯಯುತವಾಗಿಲ್ಲ. ಅವರಲ್ಲಿ ಗೂಂಡಾ ಪ್ರವೃತ್ತಿ ಇದ್ದಂತೆ ಕಾಣುತ್ತಿದೆ. ಇಂತಹವರಿಗೆ ಕರುಣೆ ತೋರಿಸಬಾರದು. ಸಮಾಜದಲ್ಲಿ ನಾಳೆ ಏನಾದರೂ ಏರುಪೇರಾದರೆ ಇಂತಹ ಕಿಡಿಗೇಡಿಗಳಿಂದ ಇಡೀ ಸಮುದಾಯಕ್ಕೇ ಕೆಟ್ಟ ಹೆಸರು ಬರುತ್ತದೆ ಎಂದು ಪೀಠ ಹೇಳಿತು.
ಸ್ಥಳದಲ್ಲಿ ಧ್ವಜ ಇಳಿಸಿದ್ದಾರೆಯೇ ಇಲ್ಲವೇ ಎಂಬುದನ್ನು ವಿಚಾರಣೆ ಮಧ್ಯದಲ್ಲೇ ವಾಟ್ಸ್ ಆ್ಯಪ್ ಮೂಲಕ ಛಾಯಾಚಿತ್ರ ತರಿಸಿಕೊಂಡು ವೀಕ್ಷಿಸಿದ ನ್ಯಾಯಮೂರ್ತಿಗಳು ಧ್ವಜಕ್ಕೆ ಯಾವುದೇ ಅಡ್ಡಿಯಾಗಿಲ್ಲ ಎಂಬುದನ್ನು ಖಾತರಿಪಡಿಸಿಕೊಂಡರು. ತನಿಖೆಗೆ ಮಧ್ಯಂತರ ತಡೆ ನೀಡಿ, ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿದರು.
ಹುಲಗೂರು ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪರುಶರಾಮ ಕಟ್ಟೀಮನಿ 2024ರ ಮಾರ್ಚ್ 3ರಂದು ತಮ್ಮ ಮೊಬೈಲ್ ವಾಟ್ಸ್ ಆ್ಯಪ್‌ನಲ್ಲಿ ಆಡಿಯೊ ಸಂದೇಶವೊಂದನ್ನು ಸ್ವೀಕರಿಸಿದ್ದರು.
ಕಾರಡಗಿ ಗ್ರಾಮದ ಅಂಜುಮನ್ ಸಮಿತಿ ಅಧ್ಯಕ್ಷ ರಬ್ಬಾನಿ ಬಿನ್ ಅಬ್ದುಲ್ ಮುನಾಫ್ ಹಾಗೂ ಮಾಜಿ ಶಾಸಕ ಸೈಯ್ಯದ್ ಅಜ್ಜಂಪೀರ್ ಖಾದ್ರಿ ಉರ್ದುವಿನಲ್ಲಿ ಪ್ರಚೋದನಕಾರಿ ಮಾತುಗಳನ್ನು ಆಡಿದ್ದಾರೆ. ಈ ಸಂಭಾಷಣೆಯಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಭಾವನೆಗಳಿವೆ ಎಂದು ಎಫ್‌ಐಆರ್ ದಾಖಲಿಸಲಾಗಿತ್ತು. ಈ ದೂರಿನ ಅನ್ವಯ ಐಪಿಸಿ ಸೆಕ್ಷನ್‌ಗಳಾದ 153 (ಎ), 295 (ಎ), 120 (ಬಿ) ಮತ್ತು 290ರ ಅಡಿಯಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದರು.