ಬೆಳಗಾವಿಯ ಬೈಲಹೊಂಗಲ ತಾಲೂಕಿನ ಮರಕುಂಬಿ ಬಳಿಯ ಇನಾಮದಾರ್ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಪೋಟಗೊಂಡು ಭೀಕರ ದುರಂತ ಸಂಭವಿಸಿ ಮೂವರು ಮೃತಪಟ್ಟಿದ್ದು ಹಲವರು ಗಂಭೀರವಾಗಿ ಗಾಯಗೊಂಡಿರುವ ವರದಿಯಾಗಿದೆ.
ಈ ಘಟನೆಯಲ್ಲಿ ಮೂವರು ಕಾರ್ಮಿಕರು ಮೃತಪಟ್ಟಿದ್ದು, ಅವರನ್ನು ಅಕ್ಷಯ ತೋಪಡೆ(45), ದೀಪಕ್ ಮುನವಳ್ಳಿ(31), ಸುದರ್ಶನ ಬನೋಶಿ(25) ಗುರುತಿಸಲಾಗಿದೆ. ಐದು ಮಂದಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ದುರಂತದಲ್ಲಿ ಗಾಯಗೊಂಡ ಕಾರ್ಮಿಕರ ವಿವರ : ಮಂಜುನಾಥ ತೇರದಾಳ, ರಾಘವೇಂದ್ರ ಗಿರಿಯಾಳ, ಗುರು ತಮ್ಮನ್ನವರ, ಭರತ ಸಾರವಾಡಿ ಮತ್ತು ಮಂಜುನಾಥ ಕಾಜಗಾರ ಎನ್ನಲಾಗಿದೆ. ಗಂಭೀರ ಗಾಯಗೊಂಡವರನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿರುವವರನ್ನು ಝೀರೋ ಟ್ರಾಫಿಕ್‌ನಲ್ಲಿಯೇ ಬೈಲಹೊಂಗಲದಿಂದ ಬೆಳಗಾವಿ ಖಾಸಗಿ ಆಸ್ಪತ್ರೆಗೆ ಕರೆತರಲಾಗಿದೆ.

ಕಾರ್ಖಾನೆಯ ನಂಬರ್ 1 ಕಂಪಾರ್ಟಮೆಂಟ್ ನಲ್ಲಿ ವಾಲ್ ರಿಪೇರಿ ಮಾಡೋ ಸಂದರ್ಭದಲ್ಲಿ ಈ ದುರಂತ ಸಂಭವಿಸಿದ್ದು, ರಿಪೇರಿ ವೇಳೆ ಏಕಾಏಕಿ ಬಾಯ್ಲರ್‌ನಲ್ಲಿ ಭಾರೀ ಸ್ಪೋಟ ಉಂಟಾಗಿದೆ. ಅದರೊಳಗೆ ಇದ್ದ ಬಿಸಿ ಮಳ್ಳಿ ಕಾರ್ಮಿಕರ ಮೈ ಮೇಲೆ ಎರಚಿಕೊಂಡ ಪರಿಣಾಮವಾಗಿ ಸ್ಥಳದಲ್ಲೇ ಹಲವರು ತೀವ್ರವಾಗಿ ಸುಟ್ಟು ಗಾಯದಿಂದ ನರಳಾಡಿದ್ದಾರೆ.
ಈ ದುರಂತವು ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಾಯ್ಲರ್ ಸ್ಪೋಟಕ್ಕೆ ನಿಖರ ಕಾರಣ, ನಿರ್ಲಕ್ಷ್ಯ ಅಥವಾ ಸುರಕ್ಷತಾ ಲೋಪಗಳಿರುವ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಕಾರ್ಖಾನೆಯ ಸುರಕ್ಷತಾ ಕ್ರಮಗಳು ಹಾಗೂ ತಾಂತ್ರಿಕ ನಿರ್ವಹಣೆ ಕುರಿತಾಗಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಸದ್ಯ ಆಸ್ಪತ್ರೆಗೆ ಬೆಳಗಾವಿ ಎಸ್ಪಿ ಕೆ.ರಾಮರಾಜನ್, ಭೇಟಿ ನೀಡಿ ಗಾಯಾಳುಗಳ ಆರೋಗ್ಯ ಸ್ಥಿತಿ ಕುರಿತು ಮಾಹಿತಿ ಪಡೆದರು. ನಂತರ ಅವರು ದುರಂತ ನಡೆದ ಸ್ಥಳಕ್ಕೂ ಭೇಟಿ ನೀಡಿ, ಪ್ರಾಥಮಿಕ ಮಾಹಿತಿ ಸಂಗ್ರಹಿಸಿದ್ದಾರೆ.
ಗಾಯಗೊಂಡ ಕೆಲವರ ಸ್ಥಿತಿ ಇನ್ನೂ ಗಂಭೀರವಾಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇರುವುದಾಗಿ ವೈದ್ಯಕೀಯ ಮೂಲಗಳು ತಿಳಿಸಿದೆ. ಈ ದುರಂತವು ಇಡೀ ಪ್ರದೇಶದಲ್ಲಿ ತೀವ್ರ ಶೋಕ ಮತ್ತು ಆತಂಕವನ್ನುಂಟುಮಾಡಿದೆ.


