ಶ್ರೀನಗರ: ಕಣಿವೆ ನಾಡು ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿದೆ. ಕುಪ್ವಾರದಲ್ಲಿ ಶನಿವಾರ ಬೆಳಗ್ಗೆ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಭೀಕರ ಗುಂಡಿನ ಚಕಮಕಿ ನಡೆದಿದೆ. ಇದರಲ್ಲಿ ಕನಿಷ್ಠ ಮೂವರು ಸೇನಾ ಯೋಧರು ಗಾಯಗೊಂಡಿದ್ದಾರೆ. ಇದೇ ವೇಳೆ, ಓರ್ವ ಉಗ್ರನನ್ನು ಭದ್ರತಾ ಸಿಬ್ಬಂದಿ ಸದೆಬಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಇಲ್ಲಿನ ಟ್ರೆಹ್ಗಾಮ್ ಪ್ರದೇಶದ ಮಚಿಲ್ ಸೆಕ್ಟರ್‌ನಲ್ಲಿರುವ ಕುಮ್ಕಾಡಿ ಪೋಸ್ಟ್‌ನಲ್ಲಿ ಭದ್ರತಾ ಪಡೆಗಳ ಉಗ್ರಗಾಮಿ ನಿಗ್ರಹ ಕಾರ್ಯಾಚರಣೆ ಕೈಗೊಂಡಿದ್ದರು. ಈ ಸಂದರ್ಭದಲ್ಲಿ ಗುಂಡಿನ ದಾಳಿ ನಡೆದಿದೆ. ಕಳೆದ ಮೂರು ದಿನಗಳಲ್ಲಿ ಜಿಲ್ಲೆಯಲ್ಲಿ ನಡೆದ ಎರಡನೇ ಎನ್‌ಕೌಂಟರ್ ಇದಾಗಿದೆ.
ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಯಲ್ಲಿ ಕುಮ್ಕಾಡಿ ಪೋಸ್ಟ್ ಬಳಿ ಉಗ್ರರ ಚಲನವಲನವನ್ನು ಪತ್ತೆಹಚ್ಚಿವೆ. ಈ ವೇಳೆ ಪರಸ್ಪರ ಗುಂಡಿನ ಚಕಮಕಿಗೆ ಜರುಗಿದೆ. ಇದುವರೆಗೆ ಒಬ್ಬ ಉಗ್ರಗಾಮಿಯನ್ನು ಎನ್‌ಕೌಂಟರ್ ಮಾಡಲಾಗಿದೆ. ಈ ಘಟನೆಯಲ್ಲಿ ಕನಿಷ್ಠ ಮೂವರು ಸೇನಾ ಯೋಧರು ಗಾಯಗೊಂಡಿದ್ದಾರೆ. ಗಾಯಾಳು ಸೈನಿಕರನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ. ಗುಂಡಿನ ಚಕಮಕಿ ಮುಂದುವರೆದಿದೆ.