ಹುಬ್ಬಳ್ಳಿ,23: ಸಿಐಡಿ ಕ್ರೈಂ ಬ್ರ್ಯಾಂಚ್ನ ಅಧಿಕಾರಿಗಳ ಸೋಗಿನಲ್ಲಿ ಬಂದಿದ್ದ ಮೂವರು ನಕಲಿ ಸಿಐಡಿ ಅಧಿಕಾರಿಗಳನ್ನು ಹಳೇ ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ.
ಇತ್ತೀಚೆಗೆ ಹುಬ್ಬಳ್ಳಿ ನಗರದಲ್ಲಿ ಮೂರು ಜನರು ಸಿಐಡಿ ಕ್ರೈಂ ಬ್ರ್ಯಾಂಚ್ ಪೊಲೀಸರು ಎಂದು ಸುಳ್ಳು ಹೇಳಿಕೊಂಡು ಚೈತನ್ಯ ನಗರದ ನಿವಾಸಿ ಯಶೋಧಾ ಮುದುಗಲ್ (30) ಎಂಬುವರಿಗೆ ಮೋಸ ಮಾಡಿ, ಹೆದರಿಸಿ ಹಣ ಪಡೆದುಕೊಂಡಿದ್ದಾರೆ. ಈ ಬಗ್ಗೆ ಮೋಸ ಹೋದ ಮಹಿಳೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಇನ್ಸ್ಪೆಕ್ಟರ್ ಎಸ್.ಎಚ್. ಯಳ್ಳೂರ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ತನಿಖೆ ಕೈಗೊಂಡು ಹಳೇ ಹುಬ್ಬಳ್ಳಿಯ ಕೃಷ್ಣಾಪೂರ ಓಣಿಯ ನಿವಾಸಿ ಚೇತನ ಹಡಪದ (39), ಲಿಂಗಸೂರಿನ ಪರಶುರಾಮಗೌಡ ಪಾಟೀಲ್ (45), ಕಾರಟಗಿಯ ಮಧು ಎಮ್ (35) ಎಂಬ ಮೂವರು ನಕಲಿ ಸಿಐಡಿ ಕ್ರೈಂ ಬ್ರ್ಯಾಂಚ್ ಅಧಿಕಾರಿಗಳನ್ನು ಬಂಧಿಸಿದ್ದಾರೆ. ಇವರಿಂದ ಎರಡು ಮೊಬೈಲ್, ಹಾಗೂ ಒಂದು ಬುಲೆಟ್ ಬೈಕನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಹಳೇ ಹುಬ್ಬಳ್ಳಿ ಪೊಲೀಸರ ಕಾರ್ಯಾಚರಣೆಯನ್ನು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.
ನೇಹಾ ಹಿರೇಮಠ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದ್ದು, ಎಸ್ಪಿ ವೆಂಕಟೇಶ ನೇತೃತ್ವದ ತಂಡ ಸೋಮವಾರ ರಾತ್ರಿ ಹುಬ್ಬಳ್ಳಿಗೆ ಬಂದು ವಾಸ್ತವ್ಯ ಹೂಡಿದೆ.