ಉದ್ಯಮಿ ಸಂತೋಷ ಕೊಲೆ ಕೇಸ್‌ನಲ್ಲಿ ಹೆಂಡತಿ ಸೇರಿ ಮೂವರು ಅರೆಸ್ಟ್; 3 ಆರೋಪಿಗಳು ಹಿಂಡಲಗಾ ಜೈಲಿಗೆ ಶಿಫ್ಟ್

Ravi Talawar
ಉದ್ಯಮಿ ಸಂತೋಷ ಕೊಲೆ ಕೇಸ್‌ನಲ್ಲಿ ಹೆಂಡತಿ ಸೇರಿ ಮೂವರು ಅರೆಸ್ಟ್; 3 ಆರೋಪಿಗಳು ಹಿಂಡಲಗಾ ಜೈಲಿಗೆ ಶಿಫ್ಟ್
WhatsApp Group Join Now
Telegram Group Join Now

ಬೆಳಗಾವಿ: ಬೆಳಗಾವಿ ಉದ್ಯಮಿ ಸಂತೋಷ ದುಂಡಪ್ಪ ಪದ್ಮಣ್ಣವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಪತ್ನಿ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮೂವರನ್ನು ಹಿಂಡಲಗಾದಲ್ಲಿರುವ ಬೆಳಗಾವಿ ಕೇಂದ್ರ ಕಾರಾಗೃಹಕ್ಕೆ ರವಾನಿಸಲಾಗಿದೆ.

ಉದ್ಯಮಿ ಪತ್ನಿ ಉಮಾ ಪದ್ಮಣ್ಣವರ (41), ಅವರ ಫೇಸ್‌ಬುಕ್‌ ಸ್ನೇಹಿತ, ಕೊಡಗು ಜಿಲ್ಲೆಯ ಶನಿವಾರಸಂತೆ ಗ್ರಾಮದ ಶೋಭಿತ್‌ ಗೌಡ (30) ಮತ್ತು ಪವನ್‌ (27) ಬಂಧಿತ ಆರೋಪಿಗಳು. ಕೊಲೆ ಪ್ರಕರಣದಲ್ಲಿ ಮನೆಗೆಲಸದವರಾದ ನಂದಾ ಕುರಿಯಾ, ಪ್ರಕಾಶ ಕುರಿಯಾ ಅವರ ಪಾತ್ರದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿಲ್ಲ. ಹಾಗಾಗಿ, ಅವರನ್ನು ಬಂಧಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಅ‌ಕ್ಟೋಬರ್​​ 9ರಂದು ಬೆಳಗಾವಿ ಆಂಜನೇಯ ನಗರದ ನಿವಾಸಿ ಸಂತೋಷ ಪದ್ಮಣ್ಣವರ ಸಾವನ್ನಪ್ಪಿದ್ದರು. ಬಳಿಕ ಅ‌.10ರಂದು ಸದಾಶಿವನಗರದ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು. ಆದರೆ, ಬಳಿಕ ತಂದೆಯ ಸಾವಿನ ಬಗ್ಗೆ ಅನುಮಾನದ ಮೇಲೆ ಮಗಳು ಸಂಜನಾ ಮಾಳಮಾರುತಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು.

ತಂದೆಯ ಮನೆಗೆ ಯಾರೆಲ್ಲಾ ಬಂದಿದ್ದರು ಎಂದು ಸಂಜನಾ ಸಿಸಿಟಿವಿ ವಿಡಿಯೋ ಪರಿಶೀಲನೆ ಮಾಡಿದ್ದಾರೆ. ಆದರೆ ಈ ವೇಳೆ, ತಾಯಿ ಉಮಾ, ಮಗಳನ್ನು ಗದರಿಸಿದ್ದರಂತೆ. ಈ ಹಿನ್ನೆಲೆಯಲ್ಲಿ ಅನುಮಾನಗೊಂಡ ಸಂಜನಾ, ಅಕ್ಟೋಬರ್ 15ರಂದು ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ತಂದೆಯ ಸಾವಿನ ಬಗ್ಗೆ ಅನುಮಾನವಿದ್ದು, ತನಿಖೆ ನಡೆಸಬೇಕು ಎಂದು ದೂರು ನೀಡಿದ್ದರು.

ಪುತ್ರಿ ನೀಡಿದ ದೂರನ್ನು ಗಂಭೀರವಾಗಿ ಪರಿಗಣಿಸಿದ ಮಾಳಮಾರುತಿ ಪೊಲೀಸರು ಸಂತೋಷ ಪದ್ಮಣ್ಣವರ ಮೃತದೇಹವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಒಳಡಿಸಿದ್ದರು. ಮೃತ ಸಂತೋಷ ಮಗಳು ಸಂಜನಾ, ಬೆಳಗಾವಿ ಎಸಿ ಶ್ರವಣ ನಾಯಕ ಹಾಗೂ ಮಾಳಮಾರುತಿ ಪೊಲೀಸ್ ಠಾಣೆಯ ಸಿಪಿಐ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆದಿತ್ತು.

ಇದೀಗ, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಸಂತೋಷ ಅವರ ಮರಣೋತ್ತರ ಪರೀಕ್ಷೆಯ ವರದಿ ಇನ್ನೂ ಬಂದಿಲ್ಲ. ಆ ವರದಿ ಬಂದ ಬಳಿಕ ಪ್ರಕರಣದ ಸ್ಪಷ್ಟತೆ ಗೊತ್ತಾಗಲಿದೆ ಎಂದು ಪೊಲೀಸರು ಹೇಳಿದ್ದಾರೆ.

WhatsApp Group Join Now
Telegram Group Join Now
Share This Article